ಬಾಗಲಕೋಟೆ: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಳಗಾವಿ ಬಾಗಲಕೋಟೆ ಗಡಿಯಿಂದ ಜಿಲ್ಲೆಗೆ ಕರೆತರಲು ತೆರಳುತ್ತಿದ್ದ ಸಿಎಂ ಭದ್ರತಾ ವಾಹನ ಪಲ್ಟಿಯಾಗಿ ಪಿಎಸ್ಐ ಸೇರಿ ಮೂವರು ಗಾಯಗೊಂಡ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಸೈದಾಪುರ ಕಪ್ಪಲಗುದ್ದಿ ಕ್ರಾಸ್ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಮುಖ್ಯಮಂತ್ರಿಗಳ ವಾಹನಕ್ಕೆ ಭದ್ರತೆ ನೀಡಲು ತೆರಳುತ್ತಿದ್ದ ಇಳಕಲ್ಲ ನಗರ ಠಾಣೆಯ ಪಿಎಸ್ಐ ಕುಮಾರ ಹಾಡಕರ, ಚಾಲಕ ಶಿವಾನಂದ ಕಟ್ಟಿಮನಿ ಹಾಗೂ ಮಹಾಲಿಂಗಪುರ ಪೊಲೀಸ್ ಠಾಣೆಯ ಪೇದೆ ಮಂಜುನಾಥ ರಾಠೋಡ ಗಾಯಗೊಂಡಿದ್ದು, ಅವರನ್ನು ಮಹಾಲಿಂಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಬ್ಬಿನ ಗದ್ದೆಗೆ ಬಿದ್ದ ಪೊಲೀಸ್ ಜೀಪ್: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೂಲಕ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿಗೆ ಬರಲಿದ್ದರು. ಹೀಗಾಗಿ ಬೆಳಗಾವಿ ಜಿಲ್ಲೆಯ ಗಡಿಯಿಂದ ನಮ್ಮ ಜಿಲ್ಲೆಗೆ ಮುಖ್ಯಮಂತ್ರಿಗಳನ್ನು ಬರ ಮಾಡಿಕೊಂಡು, ಅಲ್ಲಿಂದ ಸಿಎಂ ವಾಹನಗಳಿಗೆ ಭದ್ರತೆ ನೀಡಲು ಇಳಕಲ್ಲ ನಗರ ಠಾಣೆಯ ಪಿಎಸ್ಐ ಕುಮಾರ ಹಾಡಕರ ನಿಯೋಜನೆಗೊಂಡಿದ್ದರು.
ಅವರು ಮಹಾಲಿಂಗಪುರ ಬಳಿಯ ಜಿಲ್ಲೆಯ ಗಡಿ ಗ್ರಾಮವಾದ ಸೈದಾಪುರ ಮತ್ತು ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಮಾರ್ಗದಲ್ಲಿ ಸಿಎಂ ಭದ್ರತೆಗಾಗಿ ರಿಹರ್ಸಲ್ ಮಾಡುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪೊಲೀಸ್ ವಾಹನ, ರಸ್ತೆ ಪಕ್ಕದ ಕಬ್ಬಿನ ಗದ್ದೆಗೆ ಬಿದ್ದಿದೆ. ಕೂಡಲೇ ಸ್ಥಳೀಯರು ಹಾಗೂ ರೈತರು, ಪಿಎಸ್ಐ ಸೇರಿ ಮೂವರು ಪೊಲೀಸ್ರಿಗೆ ಪ್ರಾಥಮಿಕ ಉಪಚಾರ ನಡೆಸಿ, ಬಳಿಕ 108 ತುರ್ತು ವಾಹನಕ್ಕೆ ಕರೆ ಮಾಡಿ, ಮಹಾಲಿಂಗಪುರ ಆಸ್ಪತ್ರೆಗೆ ಸಾಗಿಸಲು ನೆರವಾದರು. ಸಿಎಂ ಭದ್ರತಾ ವಾಹನ ಪಲ್ಟಿಯಾದ ಹಿನ್ನೆಲೆಯಲ್ಲಿ ಬೇರೋಂದು ಭದ್ರತಾ ವಾಹನವನ್ನು ನಿಯೋಜನೆ ಮಾಡಲಾಯಿತು.