Advertisement

ಕಡೇಕೊಪ್ಪ ಯುವಕನ ಮನವಿಗೆ ಸ್ಪಂದಿಸಿದ ಸಿಎಂ

02:15 PM Jul 01, 2019 | Suhan S |

ಕುಷ್ಟಗಿ: ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ, ಆದರೆ ಕುಡಿಯುವ ನೀರಲ್ಲಿ ಫ್ಲೋರೈಡ್‌ ಹೆಚ್ಚಾಗಿಗಿದೆ. ಸರ್ಕಾರ ಶುದ್ಧ ನೀರಿನ ಘಟಕ ದುಸ್ಥಿತಿಯಲ್ಲಿದೆ. ಸಂಬಂಧಿಸಿದ ಅಧಿಕಾರಿಗಳು ನಾಲ್ಕು ವರ್ಷಗಳಿಂದ ಸರಿಪಡಿಸಲು ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿನ ಜನರ ಹಲ್ಲುಗಳು ಹಳದಿ, ಕಂದು ವರ್ಣಕ್ಕೆ ತಿರುಗಿರುವ ಕಾರಣಕ್ಕೆ ಕಡೇಕೊಪ್ಪ ಗ್ರಾಮದ ಯುವಕರಿಗೆ ಹೆಣ್ಣು ಕೊಡಲು ಹಿಂಜರಿಯುತ್ತಿರುವ ಬಗ್ಗೆ ಗ್ರಾಮದ ಯುವಕ ನಿಂಗಪ್ಪ ಜೀಗೇರಿ ಅವರ ಮನವಿಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪಂದಿಸಿದ್ದಾರೆ.

Advertisement

ನಾಲ್ಕು ವರ್ಷಗಳ ಹಿಂದೆ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಅಳವಡಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಆರಂಭಿಸಿರಲಿಲ್ಲ. ಅಧಿಕಾರಿಗಳ ವಿಳಂಬ ಧೋರಣೆಗೆ ಬೇಸತ್ತಿದ್ದ ಗ್ರಾಮದ ಯುವಕ ನಿಂಗಪ್ಪ ಜೀಗೇರಿ, ಪಿಡಿಒ, ಇಒ, ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಸ್ಥಳೀಯ ಶಾಸಕ, ಗ್ರಾಮೀಣ ಪಂಚಾಯತ್‌ ರಾಜ್‌ ಸಚಿವರಿಗೆ ಮನವಿ ಸಲ್ಲಿಸಿದ್ದರು ಯಾರೂ ಸ್ಪಂದಿಸಿರಲಿಲ್ಲ. ಫೆಬ್ರುವರಿ 12ರಂದು ಬೆಂಗಳೂರಿನಲ್ಲಿ ಸಿಎಂ ಜನತಾ ದರ್ಶನದಲ್ಲಿ ಮನವಿ ಸಲ್ಲಿಸಿ ನಿವೇದಿಸಿಕೊಂಡಿದ್ದರು.

ಮನವಿಗೆ ಸಿಎಂ ಅವರ ಕ್ರಮದ ಆದೇಶದ ಸಹಿ ಹಾಕುತ್ತಿದ್ದಂತೆ, ಅಪರ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಗ್ರಾಮೀಣ ನೀರು ಸರಬರಾಜು, ನೈರ್ಮಲ್ಯ ಇಲಾಖೆ ಎಇಇ ಅವರಿಗೆ ಪತ್ರ ಬರೆದು ಕ್ರಮವಹಿಸಲು ಆದೇಶಿಸಿದ್ದರು. ಆದೇಶದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕ ಸಿ.ಎಂ. ಎಚ್.ಡಿ. ಕುಮಾರಸ್ವಾಮಿ ಕೃಪೆಯಿಂದ ಕಾರ್ಯಾರಂಭವಾಗಿದೆ.

ನಮ್ಮೂರಲ್ಲಿ ಶುದ್ಧ ನೀರಿನ ಘಟಕ ನಾಲ್ಕು ವರ್ಷಗಳ ನಂತರ ಆರಂಭವಾಗಿದ್ದು ಖುಷಿಯಾಗಿದೆ. ಈ ಘಟಕ ಆರಂಭಿಸಲು ಸಿಎಂ ಮಟ್ಟದವರೆಗೂ ಮನವಿ ಸಲ್ಲಿಸಬೇಕಿರುವುದು ದುಃಖದ ಸಂಗತಿ. ಗ್ರಾಮ ವಾಸ್ತವ್ಯದಿಂದ ಇಂತಹ ಸಮಸ್ಯೆಗಳ ನೈಜಸ್ಥಿತಿ ಅರಿವಾಗುತ್ತಿವೆ. •ನಿಂಗಪ್ಪ ಜೀಗೇರಿ ಕಡೇಕೊಪ್ಪ ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next