ಕಲಬುರಗಿ: ಲೋಕಸಭಾ ಮಹಾಸಮರಕ್ಕೆ ದಿನ ಸಮೀಪಿಸುತ್ತಿರುವಂತೆಯೇ, ಕರ್ನಾಟಕದಲ್ಲೂ ಪ್ರಚಾರ ಬಿರುಸು ಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರದಿಂದಲೇ ಚುನಾವಣಾ ರಣಕಹಳೆ ಊದಿದ್ದಾರೆ. ರಾಜ್ಯದಲ್ಲಿರುವ ಮೈತ್ರಿ ಸರ್ಕಾರದ ವಿರುದಟಛಿ ಆಕ್ರೋಶದ ಸುರಿ ಮಳೆಯನ್ನೇಗೈದಿರುವ ಅವರು, “”ಇದೊಂದು ರೈತ ವಿರೋಧಿ ಸರ್ಕಾರ; ಕುಮಾರಸ್ವಾಮಿ ರಿಮೋಟ್ ಸಿಎಂ; ಅದು ಇನ್ನೊಬ್ಬರ ಕೈಯ್ಯಲಿದೆ; ಸಿಎಂ ಇಲ್ಲಿ ಪಾತ್ರಧಾರಿ” ಎಂದು ವ್ಯಂಗ್ಯವಾಡಿದ್ದಾರೆ.
ಬುಧವಾರ ನಗರದ ನೂತನ ವಿದ್ಯಾಲಯದಲ್ಲಿ ನಡೆದ ಬಿಜೆಪಿ ರ್ಯಾಲಿ ಹಾಗೂ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲೂ ಖರ್ಗೆ ಅವರ ಹೆಸರನ್ನೇ ಪ್ರಸ್ತಾಪಿಸಲಿಲ್ಲ. ಬದಲಿಗೆ ಸರ್ಕಾರವನ್ನೇ ತರಾಟೆಗೆ ತೆಗೆದುಕೊಂಡ ಅವರು, ಜೆಡಿಎಸ್ ಕಳೆದ ಚುನಾವಣೆಯಲ್ಲಿ ಸಾಲ ಮನ್ನಾ ಮಾಡುವುದಾಗಿ ತಿಳಿಸಿತ್ತು. ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿ ಮತ ಕೇಳಿರುವ ಸರ್ಕಾರ ರೈತರ ಮೇಲೆ ಪ್ರಕರಣ ಹಾಕಿ ಮೋಸ ಮಾಡಿದೆ. ಇದು ಅವರು ಜನರಿಗೆ ಸೇವೆ ಸಲ್ಲಿಸುವ ಪರಿ ಎಂಬುದನ್ನು ನಿರೂಪಿಸುತ್ತದೆ. ಇಂತಹವರನ್ನು ಬರುವ ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಿ ರಾಜ್ಯದ ಪರಿಸ್ಥಿತಿಯಂತೆ ಕೇಂದ್ರದಲ್ಲೂ ಅವಕಾಶ ನೀಡುತ್ತೀರಾ ಎಂದು ಸಾರ್ವಜನಿಕರನ್ನು ಪ್ರಶ್ನಿಸಿದರು.
ಫಲಾನುಭವಿಗಳ ಪಟ್ಟಿಯನ್ನೇ ಕೊಟ್ಟಿಲ್ಲ ದೇಶದ 12 ಕೋಟಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವರ್ಷಕ್ಕೆ ಪ್ರತಿ ರೈತನ ಖಾತೆಗೆ ನೇರವಾಗಿ 6 ಸಾವಿರ ರೂ. ಜಮಾ ಮಾಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಂಥ ಬೃಹತ್ ಯೋಜನೆಯನ್ನು ಅರಗಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಇದಕ್ಕಾಗಿಯೇ ಇಲ್ಲಿವರೆಗೆ 5 ಎಕರೆಯೊಳಗಿನ ಫಲಾನುಭವಿ ರೈತರ ಪಟ್ಟಿಯನ್ನು ರಾಜ್ಯ ಸರ್ಕಾರ ಕೊಟ್ಟಿಲ್ಲ ಎಂದು ನೇರವಾಗಿಯೇ ಪ್ರಧಾನಿ ಮೋದಿ ಆರೋಪಿಸಿದರು.
ದೇಶದಾದ್ಯಂತ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ಬಂದಿದೆ. ದೇಶದ ರೈತರು ಯೋಜನೆ ಪ್ರಯೋಜನ ಪಡೆದಿದ್ದಾರೆ. ಆದರೆ ಕರ್ನಾಟಕದಲ್ಲಿ ಇರುವ ರೈತರು ಈ ಯೋಜನೆ ಲಾಭ ಪಡೆಯಲಾಗುತ್ತಿಲ್ಲ. ಇದಕ್ಕೆ ಬೆಂಗಳೂರಿನಲ್ಲಿ ಕುಳಿತಿರುವ ರೈತ ವಿರೋಧಿ ಸರ್ಕಾರವೇ ಕಾರಣ. ರೈತರು ಇವರನ್ನು ಕ್ಷಮಿಸಲಾರರು. ದೆಹಲಿಯಲ್ಲಿರುವ ಕೇಂದ್ರ ಸರ್ಕಾರ ರೈತರಿಗೆ ಹಣ ನೀಡಿದರೆ ಅವರಿಗೆ ಹೊಟ್ಟೆ ಬೇನೆಯಾಗುತ್ತದೆ. ಏಕೆಂದರೆ ನಾವು ರೈತರ ಖಾತೆಗೆ ನೇರವಾಗಿ ಹಣವನ್ನು ಬಿಡುಗಡೆ ಮಾಡುತ್ತಿದ್ದೇವೆ. ಮಧ್ಯವರ್ತಿಗಳು ಹಣ ಲಪಟಾಯಿಸಲು ಅವಕಾಶ ನೀಡಿಲ್ಲ. ಇದರಿಂದ ಅವರಿಗೆ ನೋವಾಗುತ್ತಿದೆ ಎಂದು ಟೀಕಿಸಿದರು.
ಕಬ್ಬು ಬೆಳೆಗಾರರ ಇತ್ಯರ್ಥಕ್ಕೆ ಕ್ರಮ: ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಪ್ರತಿ ಕ್ವಿಂಟಲ್‌ಗೆ ನೇರವಾಗಿ 14 ರೂ. ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಳಿಗೆ ಬಾಕಿ ಇರುವ ರೈತರ ಹಣ ಪಾವತಿಗೆ ನೆರವು ನೀಡಲಿದೆ. ರೈತರಿಗೆ ಕಬ್ಬಿನ ಬಾಕಿ ನೀಡದೇ ಇರುವ ಕಾರ್ಖಾನೆಗಳಿಗೆ ಸರ್ಕಾರ ಬ್ಯಾಂಕ್‌ನಿಂದ ಸಾಲ ಪಡೆ ಯಲು ಸಹಾಯ ಮಾಡಲಿದೆ. ಒಂದು ವರ್ಷದ ಬಡ್ಡಿಯನ್ನು ಭರಿಸುವ ಮುಖಾಂತರ ಸಕ್ಕರೆ ದರದಲ್ಲಿ ಏರುಪೇರು ಆಗದಂತೆ ಹಾಗೂ ಕಬ್ಬು ಖರೀದಿ ಬೆಲೆಯಲ್ಲೂ ಏರುಪೇರು ಆಗದಂತೆ ಮಾಡಲು ನೂರಕ್ಕೆ 100 ಆಮದು ತೆರಿಗೆ ಹಾಕಿದೆ ಎಂದು ಮೋದಿ ಹೇಳಿದರು.
ಕಬ್ಬಿನಿಂದ ಉತ್ಪಾದನೆಯಾಗುವ ತ್ಯಾಜ್ಯದಿಂದ ಎಥೆನಾಲ್ ಉತ್ಪನ್ನವನ್ನು ನಾಲ್ಕು ಪಟ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ.
ಮುಂದಿನ ದಿನಗಳಲ್ಲಿ ಎಥೆನಾಲ್‌ನ್ನು ಸ್ಥಳೀಯವಾಗಿ ಉತ್ಪತ್ತಿ ಮಾಡುವ ಮೂಲಕ ವಿದೇಶದಿಂದ ಕಚ್ಚಾತೈಲ ಆಮದು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಒಂದು ಕಡೆ ಎಳೆದರೆ ಜೆಡಿಎಸ್‌ನವರು ಮತ್ತೂಂದೆಡೆ ಎಳೆಯುತ್ತಾರೆ. ಎಲ್ಲವೂ ಸರಿಯಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತಿದೆ. ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಫಲಾನುಭವಿಗಳಿಗೆ ಹಾಗೂ ರೈತರಿಗೆ ತಲುಪಿಸಲು ಸಮ್ಮಿಶ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಉಮೇಶ ಜಾಧವ್ ಸೇರ್ಪಡೆ
ಸೋಮವಾರವಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಡಾ|ಉಮೇಶ ಜಾಧವ್ ಅವರು ಬುಧವಾರ ಇಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ರ್ಯಾಲಿಯ ಬೃಹತ್ ವೇದಿಕೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಮುಖಂಡರ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು.
ಕಾಂಗ್ರೆಸ್‌ನ ಹಿರಿಯ ನಾಯಕ, ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್ ತೊರೆದಿರುವ ಜಾಧವ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮುಖಾಂತರ ಪರೋಕ್ಷವಾಗಿ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಮೋದಿ ಆಗಮನಕ್ಕೂ ಮುನ್ನ ಅವರು ಬಿಜೆಪಿಗೆ ಸೇರ್ಪಡೆಯಾದರು.