ಬೆಂಗಳೂರು:ನಟಿಯರಾದ ಶೃತಿ ಅವರನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹಾಗೂ ತಾರಾ ಅವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಈ ಕುರಿತು ಯಾವುದೇ ಆದೇಶ ಆಗಿಲ್ಲ ಎಂದು ಖುದ್ದು ತಾರಾ ಸ್ಪಷ್ಟಪಡಿಸಿದ್ದಾರೆ.
ಜನವರಿ 1 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಶೃತಿ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ತಾರಾ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಸೂಚಿಸಿದ್ದಾರೆ.
ಆದರೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ತಾಂತ್ರಿಕವಾಗಿ ತಾರಾ ಅವರನ್ನು ನೇಮಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯ ನೀಡಿದ್ದರು. ಆ ಸ್ಥಾನದಲ್ಲಿ ಈಗಾಗಲೇ ಒಬ್ಬರು ಕಾರ್ಯನಿರ್ವಹಿಸುತ್ತಿರುವುದರಿಂದ ಅವರನ್ನು ತೆಗೆದು ಹಾಕಲು ಸಾಧ್ಯವಿಇಲ್ಲ ಎಂದು ಹೇಳಿದ್ದರು ಎನ್ನಲಾಗಿದೆ. ಇದಾದ ನಂತರ ಆದೇಶ ಹೊರಬಿದ್ದಲ್ಲ ಎಂದು ಹೇಳಲಾಗಿದೆ.
ಈ ಮಧ್ಯೆ, ನಟಿ ತಾರಾ ಅವರು ಸಹ ಸ್ಪಷ್ಟನೆ ನೀಡಿದ್ದು, ನನಗೆ ಜ.1 ರಂದೇ ಮುಖ್ಯಮಂತ್ರಿಯವರು ಬರೆದಿರುವ ಪತ್ರ ಸ್ನೇಹಿತರು ಕಳುಹಿಸಿದ್ದರು. ಕೆಲವರು ಅಭಿನಂದನೆ ಸಹ ಸಲ್ಲಿಸಿದರು. ಆಗ, ನಾನು ವಿಚಾರಿಸಲಾಗಿ ಮಕ್ಕಳ ರಕ್ಷಣಾ ಆಯೋಗಕ್ಕೆ ನೇಮಕ ಮಾಡಲು ತಾಂತ್ರಿಕ ಸಮಸ್ಯೆ ಇದೆ ಎಂದು ಗೊತ್ತಾಯಿತು. ಹೀಗಾಗಿ, ಯಾವುದೇ ಆದೇಶವಾಗಿಲ್ಲ, ಸತ್ಯಕ್ಕೆ ದೂರವಾದುದು. ನನ್ನ ಪಕ್ಷದ ಬಗ್ಗೆ ಹಿರಿಯರ ಬಗ್ಗೆ ನಂಬಿಕೆ ಇದೆ, ಆಶಯ ಇದೆ. ನನ್ನ ಕರ್ತವ್ಯ ಗುರುತಿಸಿ ಒಳ್ಳೆಯ ಹುದ್ದೆ ಸಿಗುವ ಭರವಸೆ ಇದೆ ಎಂದು ಹೇಳಿದರು. ನನಗೆ ಹುದ್ದೆ ಆದೇಶ ಸಿಕ್ಕಿದ ತಕ್ಷಣ ನಿಮ್ಮ ಜತೆ ಸಂತಸ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.