ಸಿಂಧನೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ಕಾನೂನು ಮಂತ್ರಿ ಮಾಧುಸ್ವಾಮಿ ಅವರು ಭತ್ತ, ಜೋಳ ಖರೀದಿ ಮಿತಿ ಸಡಿಲ ಮಾಡಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ಕಾಂಗ್ರೆಸ್‌ನವರು ಇದೇ ವಿಷಯ ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವುದು ರಾಜಕೀಯ ಪ್ರೇರಿತ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ಅವರು ತಮ್ಮ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನವರು ಮೊದಲೇ ರಾಜ್ಯ ಸರಾರಕ್ಕೆ ಮನವಿ ಸಲ್ಲಿಸಬೇಕಿತ್ತು. ಇಲ್ಲವೇ ಯಾವುದನ್ನು ಮಾಡಿಲ್ಲ. ಕನಿಷ್ಠ ಮನವಿ ಸಲ್ಲಿಸದ ಮೇಲೆ ಅದನ್ನು ಕೇಳುವ ಕೆಲಸ ಮಾಡಬೇಕಿತ್ತು. ಏಕಾಏಕಿ ದಿಢೀರ್ ಹೋರಾಟಕ್ಕೆ ಇಳಿಯುತ್ತಿರುವುದು ಸಮಂಜಸವಲ್ಲ ಎಂದರು.
ಲಾಭ ಪಡೆಯುವ ಹುನ್ನಾರ: ಈಗಾಗಲೇ ನಾನು ಮತ್ತು ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಜೊತೆಗೆ, ಬೆಳಗಾವಿಯ ವಿಧಾನಮಂಡಲ ಅಧಿವೇಶನದಲ್ಲೂ ಧ್ವನಿ ಎತ್ತಿದ್ದೇನೆ. ಅಂದು ಸಿಎಂ ಸದನದಲ್ಲಿ ಇರಲಿಲ್ಲ. ಕಾನೂನು ಮಂತ್ರಿಗಳು ಉತ್ತರ ಕೊಟ್ಟಿದ್ದಾರೆ. 10ರಿಂದ 15 ದಿನದಲ್ಲಿ ಭತ್ತ 40 ಕ್ವಿಂಟಲ್, ಜೋಳ 20 ಕ್ವಿಂಟಲ್ ಎಂಬ ಷರತ್ತು ತೆಗೆದುಹಾಕುವ ವಿಶ್ವಾಸ ನಮಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಹೋರಾಟ ಮಾಡಿ, ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ. ಇದೊಂದು ರಾಜಕೀಯ ಗಿಮಿಕ್ ಎಂದರು.
ಕಳ್ಳತನ ತಡೆಗೆ ಸೂಚನೆ
ಸಿಂಧನೂರು ನಗರದಲ್ಲಿ ಐದಾರು ಮನೆಗಳು ಕಳ್ಳತನವಾಗಿವೆ. ಪ್ರಕರಣ ದಾಖಳಿಸಿಲ್ಲ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಿಬ್ಬಂದಿಯೊಂದಿಗೆ ಮಾತನಾಡಿರುವೆ. ಯಾರು ಕೂಡ ಆತಂಕಕ್ಕೆ ಒಳಗಾಗಬಾರದು. ಪೊಲೀಸರಿಗೆ ಗಸ್ತು ಹಾಕುವಂತೆ ಸೂಚನೆ ನೀಡಿದ್ದೇನೆ. ಯಾರೇ ಆಗಲಿ, ನಾಲ್ಕೈದು ದಿನ ಮನೆ ಬಿಟ್ಟು ಹೋಗುವುದಿದ್ದರೆ, ಪೊಲೀಸರಿಗೆ ಮಾಹಿತಿ ನೀಡಬೇಕು. ಆಗ ಪೊಲೀಸರು ಕಾವಲು ಕಾಯುತ್ತಾರೆ ಎಂದರು.
ಜೆಡಿಎಸ್ ಪ್ರಧಾನ ಸಂಚಾಲಕ ಬಿ.ಹರ್ಷ, ಮುಖಂಡರಾದ ಅಲ್ಲಂಪ್ರಭು ಪೂಜಾರ್, ಸುಭಾಷ್ ಪ್ರಾಂಕ್ಲಿನ್, ಸತ್ಯನಾರಾಯಣ ದಾಸರಿ, ದೇವೇಂದ್ರಗೌಡ ಇದ್ದರು.