ವಿಧಾನಸಭೆ: ದೇಶಾದ್ಯಂತ ಜುಲೈ 1ರಿಂದ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಾಯ್ದೆಗೆ ಒಪ್ಪಿಗೆ ಪಡೆಯಲು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ-2017ನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಮಂಗಳವಾರ ವಿಧೇಯಕ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಕೇಂದ್ರ ಸರ್ಕಾರ ರೂಪಿಸಿದ ಕಾಯ್ದೆಯಾಗಿದ್ದು, ಯಥಾವತ್ ಜಾರಿಗೆ ತರಬೇಕಾಗಿದೆ. ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದರು.
ಆದರೆ, ಜಿಎಸ್‌ಟಿ ಕಾಯ್ದೆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡದೆ ಏಕಾಏಕಿ ವಿಧೇಯಕ ಮಂಡಿಸಿದ ಮುಖ್ಯಮಂತ್ರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ವೈ.ಎಸ್.ವಿ.ದತ್ತ, ಕಾಯ್ದೆ ಬಗ್ಗೆ ಸದನದಲ್ಲಿ ಸಾಕಷ್ಟು ಚರ್ಚೆಯಾಗಬೇಕಾಗಿದೆ. ಆದರೆ. ನಮಗೆ ಕಾಯ್ದೆಯ ಬಗ್ಗೆ ಯಾವುದೇ ಮಾಹಿತಿ ಒದಗಿಸಿಲ್ಲ. ಹೀಗಾದರೆ ಚರ್ಚೆ ನಡೆಸುವುದು ಹೇಗೆ? ಇಂತಹ ಮಹತ್ವದ ಕಾಯ್ದೆ ಕುರಿತು ಮೊದಲೇ ಮಾಹಿತಿ ನೀಡಬೇಕಿತ್ತು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಕೇಂದ್ರ ಸರ್ಕಾರ ರೂಪಿಸಿದ ಕಾಯ್ದೆ. ಮೇಲಾಗಿ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಎಲ್ಲವೂ ಅಂತಿಮಗೊಂಡಿದೆ. ಯಾವುದೇ ಬದಲಾವಣೆಗೆ ಅವಕಾಶವಿಲ್ಲ. ಆದ್ದರಿಂದ ಚರ್ಚಿಸಿ ಪ್ರಯೋಜನವಿಲ್ಲ ಎಂದು ಹೇಳಿದರು.
ಈ ಕಾಯ್ದೆ ಜಾರಿಯಾದರೆ ರಾಜ್ಯಕ್ಕೆ ತೊಂದರೆಯಾಗುತ್ತದೆ ಎಂಬ ಆತಂಕ ಬೇಡ. ಕಾಯ್ದೆಯಲ್ಲಿ ತೆರಿಗೆಯ ವಾರ್ಷಿಕ ಬೆಳವಣಿಗೆ ದರವನ್ನು ಶೇ. 14ರಂತೆ ನಿಗದಿಪಡಿಸಿ ಐದು ವರ್ಷಗಳವರೆಗೆ ಆಗುವ ನಷ್ಟ ಭರಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಹೀಗಿರುವಾಗ ಸದಸ್ಯರು ವಿಧೇಯಕ ಮಂಡಿಸಲು ಅಡ್ಡಿಪಡಿಸಬಾರದು ಎಂದು ಮನವಿ ಮಾಡಿದರು. ನಂತರ ವಿಧೇಯಕ ಮಂಡಿಸಲು ಸದನ ಒಪ್ಪಿಗೆ ನೀಡಿತು.
ಕರ್ನಾಟಕ ಮಾರಾಟಗಳ ತೆರಿಗೆ ತಿದ್ದುಪಡಿ ವಿಧೇಯಕ
ಇದೇ ವೇಳೆ ಪೆಟ್ರೋಲಿಯಂ ಉತ್ಪನ್ನಗಳಿಗೆ ತೆರಿಗೆ ನಿಗದಿಪಡಿಸುವ ಕರ್ನಾಟಕ ಮಾರಾಟಗಳ ತೆರಿಗೆ (ತಿದ್ದುಪಡಿ) ವಿಧೇಯಕ-2017ನ್ನು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದರು.
ಪೆಟ್ರೋಲ್, ಹೈಸ್ಪೀಡ್ ಡೀಸೆಲ್, ವೈಮಾನಿಕ ಟರ್ಬೈನ್ ಇಂಧನ, ಕಚ್ಚಾತೈಲ, ನೈಸರ್ಗಿಕ ಅನಿಲ ಮುಂತಾದ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ. ಈ ಹಿನ್ನೆಲೆಯಲ್ಲಿ ಇವುಗಳಿಗೆ ತೆರಿಗೆ ನಿರ್ಧರಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಬೇಕಿದ್ದು, ಅದಕ್ಕಾಗಿ ಈ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ.