Advertisement

ಸಾಲಮನ್ನಾ ಸಮರ್ಪಕ ಅನುಷ್ಠಾನಕ್ಕೆ ಸಿಎಂ ಸೂಚನೆ

11:30 PM May 08, 2019 | Team Udayavani |

ಬೆಂಗಳೂರು: ರೈತರ ಸಾಲಮನ್ನಾ ಅನುಷ್ಠಾನ ಕುರಿತಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಬುಧವಾರ ಉನ್ನತ ಮಟ್ಟದ ಸಭೆ ನಡೆಸಿದರು.

Advertisement

ಸಾಲಮನ್ನಾ ಯೋಜನೆಯ ಅನುಷ್ಠಾನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಪ್ರಕ್ರಿಯೆಯನ್ನು ವಾರಕ್ಕೊಮ್ಮೆ ಪರಿಶೀಲಿಸುವಂತೆ ಸಹಕಾರ ಸಚಿವರಿಗೆ ಹಾಗೂ ಸಹಕಾರ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಸಾಲಮನ್ನಾ ಯೋಜನೆಯನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

2018ರ ಡಿಸೆಂಬರ್‌ ತಿಂಗಳಿನಿಂದ ರೈತರ ಸಾಲವನ್ನು ಹಂತ ಹಂತವಾಗಿ ಮನ್ನಾ ಮಾಡಲಾಗಿದೆ. ಇದುವರೆಗೆ ಸಹಕಾರ ಸಂಘಗಳ 8.3 ಲಕ್ಷ ರೈತರಿಗೆ 3,500 ಕೋಟಿ ರೂ.ಗಳಷ್ಟು ಸಾಲಮನ್ನಾದ ಮೊತ್ತ ಬಿಡುಗಡೆ ಮಾಡಲಾಗಿದೆ.

ಸಹಕಾರ ಸಂಘಗಳಲ್ಲಿ ರೈತರು ನಿಯಮಾವಳಿ ಪ್ರಕಾರ ಆರ್ಹತೆ ಪಡೆದ ದಿನದಂದು ಅವರ ಖಾತೆಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾದೇವಿ ತಿಳಿಸಿದರು.

ವಾಣಿಜ್ಯ ಬ್ಯಾಂಕುಗಳಲ್ಲಿ 7.5 ಲಕ್ಷ ರೈತರಿಗೆ 3,930 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ 1.5 ಲಕ್ಷ ರೈತರ ಸುಮಾರು 900 ಕೋಟಿ ರೂ.ಗಳ ಬಿಡುಗಡೆಗೆ ಸಿದ್ಧವಾಗಿದ್ದು, ಮೇ 23ರ ನಂತರ ಇದನ್ನು ಬಿಡುಗಡೆ ಮಾಡಲಾಗುವುದು.

Advertisement

ಒಟ್ಟಾರೆ ವಾಣಿಜ್ಯ ಬ್ಯಾಂಕ್‌ ಹಾಗೂ ಸಹಕಾರಿ ಬ್ಯಾಂಕುಗಳ 15.5 ಲಕ್ಷ ರೈತರ 7,417 ಕೋಟಿ ರೂ.ಮನ್ನಾ ಮಾಡಲಾಗಿದೆ ಎಂದು ಆರ್ಥಿಕ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್‌ ತಿಳಿಸಿದರು.

ರೈತರ ಸಾಲಮನ್ನಾ ಯೋಜನೆಯನ್ನು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ನಿಯಮಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ರೈತರ ಸಾಲಮನ್ನಾ ಈ ಆರ್ಥಿಕ ವರ್ಷದಲ್ಲೇ ಆಗಲಿದೆ.

ಸಾಲಮನ್ನಾಗೆ ಹಣಕಾಸು ಕೊರತೆಯೂ ಇಲ್ಲ ಎಂದು ಅವರು ಹೇಳಿದರು. ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next