ಭುವನೇಶ್ವರ : ಒಡಿಶಾ ರಾಜ್ಯಕ್ಕೆ ಆರ್ಥಿಕ ಸ್ವಾಯತ್ತೆ ಬೇಕೆಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆಗ್ರಹಿಸಿದ್ದಾರೆ.
ಆರ್ಥಿಕ ಸ್ವಾಯತ್ತೆ ಸಿಕ್ಕಿದರೆ ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನ ಬೇಕಾಗಿರುವುದಿಲ್ಲ, ಮಾತ್ರವಲ್ಲ ಕೇಂದ್ರದ ಯಾವುದೇ ಅನುದಾನವೂ ಬೇಕಾಗಿರುವುದಿಲ್ಲ ಎಂದವರು ಹೇಳಿದ್ದಾರೆ.
ಆರ್ಥಿಕ ಸ್ವಾಯತ್ತೆಯಿಂದ ರಾಜ್ಯ ಅಭಿವೃದ್ಧಿ ಸುಲಭವಾಗುತ್ತದೆ. ತನ್ನದೇ ಹಣಕಾಸು ಬಲದ ಮೇಲೆ ಸಮೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ಈ ಹಿಂದೆ 1990 ದಶಕದಲ್ಲೇ ಒಡಿಶಾ ದ ಹಿರಿಯ ನಾಯಕ ಬಿಜು ಪಟ್ನಾಯಕ್ ಅವರು ಈ ಬಗೆಯ ಆರ್ಥಿಕ ಸ್ವಾಯತ್ತೆಗೆ ಮನವಿ ಮಾಡಿದ್ದರು ಎಂದು ನವೀನ್ ಪಟ್ನಾಯಕ್ ಹೇಳಿದರು.
ಅವರು ಬಿಜು ಜನತಾ ದಳ (ಬಿಜೆಡಿ) ಪಕ್ಷದ 21ನೇ ಸ್ಥಾಪನಾ ದಿನದ ಸಂದರ್ಭದಲ್ಲಿ ಇಂದಿಲ್ಲಿ ಮಾತನಾಡುತ್ತಿದ್ದರು. ಆದರೆ ತಾವು ಬಯಸುವ ಆರ್ಥಿಕ ಸ್ವಾಯತ್ತೆ ಸ್ವರೂಪ, ಗುಣ ಲಕ್ಷಣ ಇತ್ಯಾದಿಗಳ ವಿವರವನ್ನು ನವೀನ್ ಪಟ್ನಾಯಕ್ ನೀಡಲಿಲ್ಲ.
ಒಡಿಶಾ 14ನೇ ಹಣಕಾಸು ಆಯೋಗದಿಂದ 4.59 ಲಕ್ಷ ಕೋಟಿ ರೂ. ಕೇಳಿತ್ತು. ಆದರೆ ಅದು ಕೇವಲ 1.84 ಲಕ್ಷ ಕೋಟಿ ಕೊಟ್ಟಿತು. 2015-20ರ ಸಾಲಿನ ಕೇಂದ್ರ ತೆರಿಗೆಗಳು ಮತ್ತು ಸುಂಕದಲ್ಲಿನ ರಾಜ್ಯದ ಪಾಲು ಇದಾಗಿತ್ತು.
ಕೇಂದ್ರ ಸರಕಾರ ಎಲ್ಲ ರಂಗಗಳಲ್ಲೂ ಒಡಿಶಾ ವನ್ನು ನಿರ್ಲಕ್ಷಿಸುತ್ತಿದೆ ಎಂದು ನವೀನ್ ಪಟ್ನಾಯಕ್ ಆರೋಪಿಸಿದರು.