Advertisement

ಸಿಎಂ, ಸಚಿವರು ರೆಸಾರ್ಟ್‌ನಲ್ಲಿ ವಿಶ್ರಾಂತಿ: ಬಿಎಸ್‌ವೈ ಆಕ್ರೋಶ

11:37 PM Apr 29, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬರಗಾಲದಿಂದ ತತ್ತರಿಸುತ್ತಿರುವ ಜನರಿಗೆ ಕನಿಷ್ಠ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸರ್ಕಾರ ವಿಫ‌ಲವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲಿಗೆ ಮುಖ್ಯಮಂತ್ರಿಗಳು, ಸಚಿವರು ದಣಿವಾರಿಸಿಕೊಳ್ಳಲು ರೆಸಾರ್ಟ್‌ಗಳಿಗೆ ತೆರಳಿದ್ದು, ಮೋಜಿ ಮಸ್ತಿಯಲ್ಲಿ ಮೈಮರೆತಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮುಗಿಯುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸರ್ಕಾರ ಗಾಢ ನಿದ್ರೆಯಲ್ಲ, ಮೋಜು ಮಸ್ತಿಯಲ್ಲಿ ಮೈಮರೆತಿದೆ. ರಾಜ್ಯದ 162 ಬರಪೀಡಿತ ತಾಲೂಕುಗಳಲ್ಲಿ ಜನ- ಜಾನುವಾರುಗಳು ಬರ ತೀವ್ರತೆಗೆ ಸಿಲುಕಿ ನಲುಗುತ್ತಿವೆ. ಆದರೆ, ರಾಜ್ಯದ ಜನರ ಸಮಸ್ಯೆ ಅರಿತು ಸ್ಪಂದಿಸುವಲ್ಲಿ ಸಚಿವರು, ಮುಖ್ಯಮಂತ್ರಿಗಳು ಪ್ರಯತ್ನ ನಡೆಸಿಲ್ಲ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.

ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಈ ಸ್ಥಿತಿಯಲ್ಲಿದ್ದರೆ ಮುಖ್ಯಮಂತ್ರಿಗಳು, ಹಲವು ಸಚಿವರು ದಣಿವಾರಿಸಿಕೊಳ್ಳಲು ರೆಸಾರ್ಟ್‌ ಮತ್ತು ವಿದೇಶಗಳಿಗೆ ಹೋಗಿದ್ದಾರೆ. ಮುಖ್ಯಮಂತ್ರಿಗಳೇ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯಲು ಮುಂದಾದರೆ ರಾಜ್ಯದ ಆಡಳಿತ ವಿಧಾನಸೌಧದಲ್ಲಿ ನಿದ್ರೆಗೆ ಜಾರುವುದು ಖಚಿತ. ಬೆಂಗಳೂರು ನಗರದಲ್ಲೂ ಇದೇ ರೀತಿ ಭೀಕರ ಪರಿಸ್ಥಿತಿ ಇದೆ. ಕೂಡಲೇ ಮುಖ್ಯ ಕಾರ್ಯದರ್ಶಿಗಳು ಪರಿಸ್ಥಿತಿಯನ್ನು ಅವಲೋಕಿಸಬೇಕು. ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದರೆ ರಾಜ್ಯದ ಜನ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next