Advertisement

ಸಿಎಂ, ಸಚಿವರ ಕಾರ್ಯವೈಖರಿ: ಶಾಸಕರ ಅತೃಪ್ತಿ

11:04 PM Mar 13, 2020 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿ ಯೂರಪ್ಪ ಹಾಗೂ ಆಯ್ದ ಸಚಿವರ ಕಾರ್ಯ ವೈಖರಿ, ಸರ್ಕಾರದ ಆಡಳಿತದ ಬಗ್ಗೆ ಪಕ್ಷದ ಶಾಸಕರೇ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಗುರುವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಡೆದಿದೆ.

Advertisement

ಶಾಸಕರು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿ ಸಲು ಅವಕಾಶ ಕಲ್ಪಿಸಿದ ಯಡಿಯೂರಪ್ಪ ಅವರು, ಶಾಸಕರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅನಾಮಧೇಯ ಪತ್ರದ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು ಎನ್ನಲಾಗಿದೆ.

ಮುಖ್ಯಮಂತ್ರಿಗಳ ಕಾರ್ಯ ವೈಖರಿ, ಆಡಳಿತದಲ್ಲಿ ಪುತ್ರ ಬಿ.ವೈ.ವಿಜಯೇಂದ್ರ ಅವರ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಆರೋಪಿಸಿ ಹರಿದಾಡುತ್ತಿರುವ ಅನಾಮಧೇಯ ಪತ್ರದ ಬಗ್ಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪ್ರಸ್ತಾಪಿಸಿದರು. ಈ ಬಗ್ಗೆ ಸಮಗ್ರ ತನಿಖೆಯಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು ಎನ್ನಲಾಗಿದೆ.

ಮುಖ್ಯಮಂತ್ರಿಗಳ ಕಾರ್ಯವೈಖರಿ, ಕುಟುಂಬದವರ ಹಸ್ತಕ್ಷೇಪ, ನಾಯಕತ್ವ ಬದಲಾವಣೆ ಇತರ ವಿಚಾರಗಳನ್ನು ಹರಿ ಬಿಟ್ಟು ಗೊಂದಲ ಸೃಷ್ಟಿಸುವುದು ಸರಿಯಲ್ಲ. ಇದರಿಂದ ಪಕ್ಷ ಹಾಗೂ ಸರ್ಕಾರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಯಾವುದೇ ರೀತಿಯ ಗೊಂದಲ, ಅನುಮಾನ ಗಳಿದ್ದರೆ ಆ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿ ಬಗೆಹರಿಸಿ ಕೊಳ್ಳಬೇಕು. ಅದನ್ನು ಬಿಟ್ಟು ಈ ರೀತಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಇದು ದೀರ್ಘಾವಧಿಯಲ್ಲಿ ಗಂಭೀರ ಪರಿಣಾಮ ಬೀರಲಿದೆ. ಪಕ್ಷದವರೇ ಈ ರೀತಿಯ ಅನಾಮಧೇಯ ಪತ್ರ ಹರಿ ಬಿಟ್ಟು ಗೊಂದಲ ಸೃಷ್ಟಿಸುತ್ತಿರುವಂತಿದೆ ಎಂದು ಕೆಲ ಶಾಸಕರು ಅಭಿಪ್ರಾಯಪಟ್ಟರು ಎನ್ನಲಾಗಿದೆ.

ಮುಖ್ಯಮಂತ್ರಿಗಳು ಸ್ಪಂದಿಸುತ್ತಿಲ್ಲ: ಮುಖ್ಯಮಂತ್ರಿ ಯನ್ನು ಭೇಟಿಯಾಗುವುದೇ ಕಷ್ಟವಾಗಿದೆ. ಹಿಂದಿನ ಸರ್ಕಾರಗಳಲ್ಲಿ ಆಯಾ ಪಕ್ಷದ ಶಾಸಕರಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಅಂದಿನ ಮುಖ್ಯಮಂತ್ರಿಗಳು ನೆರವಾಗುತ್ತಿದ್ದರು. ಆದರೆ, ಈಗ ಸರ್ಕಾರ ರಚನೆಯಾಗಿ ಆರು ತಿಂಗಳಾದರೂ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಕೆಲವೇ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಇದರಿಂದ ಕ್ಷೇತ್ರದ ಜನರನ್ನು ಎದುರಿಸುವುದು ಕಷ್ಟವಾಗಿದೆ. ಮುಖ್ಯಮಂತ್ರಿಗಳು ನಿಯಮಿತವಾಗಿ ಸಿಗುವಂತಾಗಬೇಕು ಎಂದು ಶಾಸಕರು ಮನವಿ ಮಾಡಿದರು ಎಂದು ಹೇಳಲಾಗಿದೆ.

Advertisement

ಪೂರಕ ಸ್ಪಂದನೆ – ಮುಖ್ಯಮಂತ್ರಿ ಭರವಸೆ: ಬಹುತೇಕ ಸಚಿವರು ಶಾಸಕರ ಮನವಿಗೆ ಸ್ಪಂದಿಸುತ್ತಿಲ್ಲ. ವಿಧಾನಸೌಧದ ಕಚೇರಿಗಳಿಗೂ ಬರುತ್ತಿಲ್ಲ. ವಿಧಾನಮಂಡಲದ ಅಧಿವೇಶನ ದಲ್ಲೂ ಕಾಣುವುದಿಲ್ಲ. ಶಾಸಕರು, ಪಕ್ಷದ ಕಾರ್ಯಕರ್ತರ ಸಮಸ್ಯೆಗಳನ್ನೂ ಆಲಿಸುತ್ತಿಲ್ಲ. ಪಕ್ಷದ ಸರ್ಕಾರವಿದ್ದಾಗಲೂ ಶಾಸಕರ ಕೆಲಸ ಕಾರ್ಯ ನಡೆಯದಿರುವುದು ಸರಿಯಲ್ಲ. ಕೆಲ ಸಚಿವರ ಚಲನವಲನಗಳ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದೆ. ಕೆಲ ಸಚಿವರು ಜಿಲ್ಲೆಗಳಿಗೂ ಭೇಟಿ ನೀಡುವುದಿಲ್ಲ. ಸಂಬಂಧಪಟ್ಟ ಇಲಾಖೆಯ ಪ್ರಗತಿ ಪರಿಶೀಲನೆಯನ್ನೂ ನಡೆಸುವುದಿಲ್ಲ.

ಈ ರೀತಿ ನಡೆದರೆ ಜನರ ವಿಶ್ವಾಸ ಉಳಿಸಿಕೊಳ್ಳುವುದು ಹೇಗೆ ಎಂದು ಕೆಲ ಶಾಸಕರು ಪ್ರಶ್ನಿಸಿದರು ಎಂದು ತಿಳಿದು ಬಂದಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಯಡಿಯೂರಪ್ಪ, ಶಾಸಕರು ನಿಯಮಿತವಾಗಿ ಭೇಟಿಯಾಗಿ ಚರ್ಚಿಸಲು ಅವಕಾಶ ಕಲ್ಪಿಸಲಾಗುವುದು. ಹಾಗೆಯೇ, ಸಚಿವರು ಸಹ ಶಾಸಕರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ವ್ಯವಸ್ಥೆ ತರಲಾಗುವುದು. ಆರೂವರೆ ವರ್ಷಗಳ ಬಳಿಕ ಸರ್ಕಾರ ರಚನೆಯಾಗಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿರುತ್ತದೆ. ಅದಕ್ಕೆ ಪೂರಕವಾಗಿ ಸ್ಪಂದಿಸಲಾಗುವುದು ಎಂಬುದಾಗಿ ಭರವಸೆ ನೀಡಿದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next