Advertisement

ಬೆಳಗಾವಿ ಬಿಜೆಪಿ ಶಾಸಕರ ಜತೆ ಸಿಎಂ ಸಭೆ; ಕತ್ತಿ ಗೈರು

11:39 PM Sep 14, 2019 | Team Udayavani |

ಬೆಂಗಳೂರು: ಸಚಿವ ಸ್ಥಾನ ವಂಚಿತ ಉಮೇಶ್‌ಕತ್ತಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶನಿವಾರ ಕರೆದಿದ್ದ ಬೆಳಗಾವಿ ಜಿಲ್ಲಾ ಶಾಸಕರ ಸಭೆಯಲ್ಲಿ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 2ನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗುವ ನಿರೀಕ್ಷೆ ಹೊಂದಿದ್ದ ಉಮೇಶ್‌ ಕತ್ತಿ, ತೀವ್ರ ಬೇಸರಗೊಂಡಿದ್ದಾರೆಂದು ಹೇಳಲಾಗಿದೆ.

Advertisement

ಶ್ರೀಮಂತ ಪಾಟೀಲ್‌ ಹಾಜರು: ಉಮೇಶ್‌ ಕತ್ತಿ ಅವರನ್ನು ಸಭೆಗೆ ಕರೆತರಲು ಸಾಕಷ್ಟು ಪ್ರಯತ್ನಪಟ್ಟರೂ ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ, ಶಶಿಕಲಾ ಜೊಲ್ಲೆ, ಶಾಸಕರಾದ ಅನಿಲ್‌ ಬೆನಕೆ, ಅಭಯ ಪಾಟೀಲ್‌, ಯಾದವಾಡ , ದೊಡ್ಡಗೌಡರ ಮಹಾಂತೇಶ್‌, ಪಿ.ರಾಜೀವ್‌, ಸೇರಿ ಉಳಿದ ಶಾಸಕರು ಭಾಗವಹಿಸಿದ್ದರು. ಅನರ್ಹ ಶಾಸಕ ಶ್ರೀಮಂತ ಪಾಟೀಲ್‌ ಸಭೆಗೆ ಹಾಜರಾಗಿದ್ದರು.

ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾಗಲೂ ಉಮೇಶ್‌ ಕತ್ತಿ ಗೈರಾಗಿದ್ದರು. ಹೀಗಾಗಿ, ಅವರ ಅಸ ಮಾಧಾನ ಮುಂದುವರಿದಿದೆ ಎಂದು ಹೇಳಲಾಗಿದೆ. ಬಾಲಚಂದ್ರ ಜಾರಕಿಹೊಳಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಭೆಗೆ ಗೈರಾಗಿದ್ದರಾದರೂ ಲಕ್ಷ್ಮಣ ಸವದಿ ದೆಹಲಿಗೆ ತೆರಳಿದ್ದ ಕಾರಣ, ಬಾಲಚಂದ್ರ ಜಾರಕಿಹೊಳಿ ಅನ್ಯ ಕಾರ್ಯನಿಮಿತ್ತ ಸಭೆಗೆ ಬಂದಿರಲಿಲ್ಲ ಎಂದು ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, “ಯಾರಿಗೂ ಯಾವುದೇ ರೀತಿಯ ಅಸಮಾಧಾನವಿಲ್ಲ. ಉಮೇಶ್‌ ಕತ್ತಿ ಅವರು ಮನೆಗೆ ಬಂದು ಮಾತನಾಡಿ ಹೋಗಿದ್ದಾರೆ’ ಎಂದು ಸ್ಪಷ್ಟಪಡಿಸಿದರು. ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿ, ಸಭೆಗೆ ಎಲ್ಲಾ ಶಾಸಕರಿಗೂ ಆಹ್ವಾನವಿತ್ತು. ಆದರೆ, ಕೆಲವರು ಪೂರ್ವ ಭಾವಿ ಕೆಲಸಗಳ ಕಾರಣ ಬಂದಿಲ್ಲ ಎಂದು ತಿಳಿಸಿದರು. ಪ್ರವಾಹ ಪರಿಸ್ಥಿತಿ ಸಂಬಂಧ ಸಿಎಂ ನಮ್ಮ ಜತೆ ಚರ್ಚಿಸಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಪುನರ್ವಸತಿ, ಪರಿಹಾರ ಕ್ರಮ ಕೈಗೊಳ್ಳುತ್ತಿದೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿನ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ್ದಾರೆಂದರು.

ಶಾಸಕರ ಮನವಿ: ಬೆಳಗಾವಿ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಲ್ಲಿ ಸಾಕಷ್ಟು ತೊಂದರೆಯಾಗಿದೆ. ಪರಿಹಾರ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿವೆ. ಮನೆ ಕಟ್ಟಿಕೊಡುವ ಕೆಲಸ ವಿಳಂಬವಾಗುವುದರಿಂದ ತಾತ್ಕಾಲಿಕವಾಗಿ ಶೆಡ್‌ ಆದರೂ ಕಟ್ಟಿಸಿಕೊಡಬೇಕಾಗಿದೆ ಎಂದು ಶಾಸಕರು ಮನವಿ ಮಾಡಿದರು.

Advertisement

ಈ ಮನವಿಗೆ ಸ್ಪಂದಿಸಿದ ಸಿಎಂ, ಮನೆ ಕಟ್ಟಿಕೊಳ್ಳುವವರಿಗೆ ಅಡಿಪಾಯ ಹಾಕಲು 1 ಲಕ್ಷ ರೂ., ನಂತರ ಉಳಿದ 4 ಲಕ್ಷ ರೂ. ಬಿಡುಗಡೆಗೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ, ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಭಾಗವಹಿಸಿದ್ದರು.

ತಲಾ 25 ಕೋಟಿ ರೂ. ಬಿಡುಗಡೆ: 10 ಜಿಲ್ಲೆಗಳ ಶಾಸಕರ ಜತೆ ಸಭೆ ನಡೆಸಿದ್ದೇನೆ. ತಮ್ಮ ಕ್ಷೇತ್ರಗಳ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವುದೇ ನಮ್ಮ ಮೊದಲ ಆದ್ಯತೆ. ಶಾಸಕರ ಕ್ಷೇತ್ರಗಳಲ್ಲಿ ರಸ್ತೆ ಅಭಿವೃದ್ಧಿಗೆ ತಲಾ 25 ಕೋಟಿ ರೂ. ಬಿಡುಗಡೆ ಮಾಡುವ ಭರವಸೆ ನೀಡಲಾಗಿದೆ. ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆಗಳನ್ನು ಶೀಘ್ರ ಮುಗಿಸಿ ತುರ್ತು ಕಾಮಗಾರಿ ಬೇಗ ಮುಗಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಮೂಡಿಗೆರೆ ಕ್ಷೇತ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಚನ್ನಪ್ಪಗೌಡರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಸಾಲದಿಂದ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಬಾರದು ಎಂದು ಕೈ ಜೋಡಿಸಿ ಮನವಿ ಮಾಡುತ್ತೇನೆ.
-ಬಿ.ಎಸ್‌.ಯಡಿಯೂರಪ್ಪ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next