ಬೆಂಗಳೂರು: ಗುರುವಾರ ವಿಶ್ವಾಸ ಮತ ಯಾಚನೆಗೆ ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಬುಧವಾರ ಸಂಜೆ ಕಾಂಗ್ರೆಸ್ ಶಾಸಕರು ಉಳಿದುಕೊಂಡಿದ್ದ ಪ್ರಕೃತಿ ರೆಸಾರ್ಟ್‌ಗೆ ತೆರಳಿ ಕಾಂಗ್ರೆಸ್ ಶಾಸಕರೊಂದಿಗೆ ಅನೌಪಚಾರಿಕ ಸಭೆ ನಡೆಸಿದರು.
ಸುಪ್ರೀಂಕೋರ್ಟ್ ತೀರ್ಪಿನಿಂದ ವಿಚಲಿತರಾದಂತೆ ಕಂಡು ಬಂದಿದ್ದ ಮೈತ್ರಿ ಪಕ್ಷಗಳ ನಾಯಕರು ಬುಧವಾರ ಸಂಜೆ ವೇಳೆಗೆ ವಿಶ್ವಾಸದಲ್ಲಿದ್ದರು. ಕಾಂಗ್ರೆಸ್ ಶಾಸಕರ ಸಭೆಯಲ್ಲಿಯೂ ಸಿಎಂ ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ ಸಂಜೆ ನಡೆದ ಅನೌಪಚಾರಿಕ ಸಭೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್, ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಹಾಜರಿದ್ದರು.
ಅನಾರೋಗ್ಯ ವದಂತಿ: ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಕಾರ್ಮಿಕ ಸಚಿವ ವೆಂಕಟರಮಣಪ್ಪ ಹಾಗೂ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅಸ್ವಸ್ಥರಾಗಿದ್ದಾರೆ ಎಂಬ ವದಂತಿ ಕೇಳಿ ಬಂದಿತ್ತು.ಅದೇ ಹಿನ್ನೆಲೆಯಲ್ಲಿ ರೆಸಾರ್ಟ್‌ಗೆ ವೈದ್ಯರನ್ನೂ ಕರೆಸಲಾಗಿತ್ತು. ಆದರೆ, ತಮಗೆ ಯಾವುದೇ ತೊಂದರೆಯಾಗಿಲ್ಲ ಎಂದು ಬಿ.ಕೆ. ಸಂಗಮೇಶ್ ಸ್ಪಷ್ಟಪಡಿಸಿದ್ದಾರೆ.
ಅಧಿವೇಶನ ಪ್ರಾರಂಭಕ್ಕೂ ಮುನ್ನವೇ ಎಲ್ಲ ಶಾಸಕರಿಗೂ ವಿಪ್ ಜಾರಿಗೊಳಿಸಲಾಗಿದೆ. ಈಗ ಮತ್ತೂಮ್ಮೆ ವಿಪ್ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಎಲ್ಲ ಶಾಸಕರ ಮನೆಗಳಿಗೂ ವಿಪ್ ತಲುಪಿಸಲಾಗುವುದು.
-ಗಣೇಶ್ ಹುಕ್ಕೇರಿ, ಸರ್ಕಾರದ ಮುಖ್ಯ ಸಚೇತಕ