Advertisement

ನವಲಿ ಜಲಾಶಯದ ಚರ್ಚೆಗೆ ಸಿಎಂ ಸಭೆ?

03:49 PM Feb 26, 2020 | Suhan S |

ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳಿನ ಪರ್ಯಾಯವಾಗಿ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಮಾಡಬೇಕೆನ್ನುವ ಬಹು ದಿನದ ಬೇಡಿಕೆಗೆ ಮತ್ತೇ ಜೀವ ಬಂದಿದೆ.

Advertisement

ಸಿಎಂ ಬಿಎಸ್‌ವೈ ಅವರು ಅವರು ಫೆ.26ರಂದು ಜಿಲ್ಲೆಗೆ ಆಗಮಿಸಲಿದ್ದು, ಈ ಭಾಗದ ಶಾಸಕ-ಸಂಸದರೊಂದಿಗೆ ಕೊಪ್ಪಳದಲ್ಲಿ ಅರ್ಧಗಂಟೆಗಳ ಕಾಲ ಅನೌಪಚಾರಿಕ ಸಭೆ ನಡೆಸಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ತುಂಗಭದ್ರಾ ಜಲಾಶಯ ನಿರ್ಮಾಣವಾಗಿದೆ. ಆದರೆ ಪ್ರತಿ ವರ್ಷವೂ ಡ್ಯಾಂಗೆ 0.50 ಟಿಎಂಸಿ ಅಡಿಯಷ್ಟು ಹೂಳು ತುಂಬಿಕೊಳ್ಳುತ್ತಿದ್ದು, ಕಳೆದ ಆರು ದಶಕದಲ್ಲಿ ಬರೊಬ್ಬರಿ 33 ಟಿಎಂಸಿ ಅಡಿ ಹೂಳು ಡ್ಯಾಂ ಒಡಲಾಳಲದಲ್ಲಿ ಸಂಗ್ರಹವಾಗಿದೆ. ಇದನ್ನು ತೆಗೆಯುವುದು ಅಸಾಧ್ಯವೆಂದು ಈ ಹಿಂದೆಯೇ ಸರ್ಕಾರ ನಿರ್ಧರಿಸಿ, 33 ಟಿಎಂಸಿ ಅಡಿ ಹರಿದು ವ್ಯರ್ಥವಾಗುವ ನೀರನ್ನು ನವಲಿ ಬಳಿ ಹಿಡಿದಿಡಲು ಸಮನಾಂತರ ಜಲಾಶಯದ ಮಾತುಗಳು ವರ್ಷಗಳಿಂದ ಕೇಳಿ ಬಂದಿವೆ. ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ನವಲಿ ಜಲಾಶಯ ನಿರ್ಮಾಣದ ಕುರಿತು ತಾಂತ್ರಿಕ ಸಾಧ್ಯತೆಗಳ ಶೋಧನೆ ನಡೆಸಲು ಬಜೆಟ್‌ ನಲ್ಲಿ ಘೋಷಣೆ ಮಾಡಿದ್ದರು. ಆದರೆ ಅದು ಕಾರ್ಯಗತಗೊಳ್ಳಲಿಲ್ಲ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿ ಕಾರಕ್ಕೇರಿದೆ. ಇಲ್ಲಿನ ಶಾಸಕ-ಸಂಸದರು ಚುನಾವಣೆಯ ಸಂದರ್ಭದಲ್ಲಿ ಜನತೆಗೆ ನವಲಿ ಜಲಾಶಯ ನಿರ್ಮಾಣದ ಕುರಿತು ಭರವಸೆ ನೀಡಿಯೇ ಅಧಿಕಾರದ ಗದ್ದುಗೆ ಹಿಡಿದಿದ್ದು, ಅವರಿಗೆ ಡ್ಯಾಂ ನಿರ್ಮಾಣದ ಕುರಿತು ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಒಂದು ಡ್ಯಾಂ ನಿರ್ಮಾಣ ಮಾಡುವುದೆಂದರೆ ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಹತ್ತಾರು ಸಾವಿರ ಕೋಟಿ ಅನುದಾನದ ಅವಶ್ಯಕತೆಯಿರುತ್ತದೆ. ಆದರೆ ಈ ಹಿಂದೆ ಬಿಎಸ್‌ವೈ ಅವರು ಕೊಪ್ಪಳ ಜಿಲ್ಲೆಗೆ ಜನರ ಬಳಿ ಮತ ಕೇಳಲು ಆಗಮಿಸಿದ್ದ ವೇಳೆ ನವಲಿ ಬಳಿಯ ಜಲಾಶಯ ನಿರ್ಮಾಣದ ಮಾತನ್ನಾಡಿದ್ದಾರೆ. ಡ್ಯಾಂನಿಂದ ಹರಿದು ವ್ಯರ್ಥವಾಗಿ ನದಿಪಾತ್ರಗಳಿಗೆ ಸೇರುವ ನೀರನ್ನು ಮಿನಿ ಡ್ಯಾಂನಲ್ಲಿ ಸಂಗ್ರಹಿಸಿಟ್ಟರೆ ಡ್ಯಾಂ ನಿರ್ಮಾಣವಾದರೆ ಈ ಭಾಗದ ಲಕ್ಷಾಂತರ ಅನ್ನದಾತರು ಪುನಃ ಬದುಕು ಕಟ್ಟಿಕೊಳ್ಳಲಿದ್ದಾರೆ ಎನ್ನುವುದು ಇಲ್ಲಿನ ಜನಪ್ರತಿನಿಧಿಗಳ ಅಭಿಲಾಸೆಯಾಗಿದೆ.

ಕೊಪ್ಪಳ ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್‌, ಬಸವರಾಜ ದಢೇಸೂಗೂರು, ಪರಣ್ಣ ಮುನವಳ್ಳಿ ಸೇರಿದಂತೆ ರಾಯಚೂರು, ಬಳ್ಳಾರಿ ಭಾಗದ ಶಾಸಕ-ಸಂಸದರು, ವಿಧಾನ ಪರಿಷತ್‌ ಸದಸ್ಯರು ಇತ್ತೀಚೆಗೆ ಪರಾಜಿತ ಅಭ್ಯರ್ಥಿಗಳು ಸಹಿತ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಒಂದೇ ಮಾತು, ಡ್ಯಾಂ ನಿರ್ಮಾಣಕ್ಕೆ ಇದೇ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಘೋಷಣೆ ಮಾಡಬೇಕೆನ್ನುವ ಹಕ್ಕೋತ್ತಾಯವಿದೆ. ಹಾಗಾಗಿ ಸಿಎಂ ಅವರ ಗಮನ ಸೆಳೆಯಲು ಈ ಭಾಗದ 21ಕ್ಕೂ ಹೆಚ್ಚು ಶಾಸಕರು ಭರ್ಜರಿ ಸಿದ್ಧತೆಯಲ್ಲಿದ್ದಾರೆ.

Advertisement

ವಿಮಾನ ನಿಲ್ದಾಣದಲ್ಲಿ ವಿಶೇಷ ಸಭೆ?:  ಇನ್ನೂ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಕೊಪ್ಪಳಕ್ಕೆ ಫೆ.26ರಂದು ಶಾಸಕ ಹಾಲಪ್ಪ ಆಚಾರ್‌ ಅವರ ಸಂಬಂಧಿಯ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಆ ವೇಳೆ ವಿಮಾನ ನಿಲ್ದಾಣದಲ್ಲಿಯೇ ಈ ಭಾಗದ ಶಾಸಕ-ಸಂಸದರು ಸಿಎಂ ಜೊತೆ ನವಲಿ ಡ್ಯಾಂನ ಕುರಿತಂತೆ ಪ್ರತ್ಯೇಕ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಬೆಳಗ್ಗೆ 11 ಗಂಟೆಗೆ ವಿಮಾನ ನಿಲ್ದಾಣಕ್ಕೆ ಬರುವ ಸಿಎಂ ಅವರು ಅರ್ಧ ಗಂಟೆಗಳ ಕಾಲ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು ಸೇರಿ ಹಲವು ನಾಯಕರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎಲ್ಲ ತಯಾರಿಯೂ ನಡೆದಿದ್ದು, ಇದೇ ಬಜೆಟ್‌ನಲ್ಲಿ ನವಲಿ ಡ್ಯಾಂ ನಿರ್ಮಾಣದ ಕುರಿತು ಘೋಷಣೆ ಮಾಡಿದರೆ ನಮಗೆ ಮುಂದಿನ ದಿನದಲ್ಲಿ ನೆರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ನವಲಿ ಜಲಾಶಯ ನಿರ್ಮಾಣಕ್ಕೆ ಈ ಭಾಗದ ಶಾಸಕ-ಸಂಸದರು ಸಿಎಂ ಅವರಿಗೆ ಒತ್ತಡ ಹೇರುವ ಮೂಲಕ ನೀರಾವರಿಗೆ ಆದ್ಯತೆ ನೀಡಲೇ ಬೇಕೆನ್ನುವ ಮಾತನ್ನಾಡುತ್ತಿದ್ದಾರೆ. ಸಿಎಂ ಸಭೆ ನಡೆಸಿ ಅಂತಿಮ ತೀರ್ಮಾಣ ಮಾಡಿ ಇದೇ ಬಜೆಟ್‌ನಲ್ಲಿ ಮಾತನಾಡುವ ಸಾಧ್ಯತೆ ಹೆಚ್ಚಾಗಿದೆ.

 

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next