ಬೆಂಗಳೂರು : ವಿಧಾನಸೌಧದಲ್ಲಿ ಸಚಿವರು, ಶಾಸಕರು ಮತ್ತು ಅಧಿಕಾರಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ಸಭೆ ನಡೆಸಿದರು. ಈ ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಜನಪ್ರತಿನಿಧಿಗಳ ಸಭೆಯಲ್ಲಿ ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್ ಅಶೋಕ್, ಆರೋಗ್ಯ ಸಚಿವ ಸುಧಾಕರ್, ವಿ ಸೋಮಣ್ಣ, ರಾಮಲಿಂಗರೆಡ್ಡಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಸುಧಾಕರ್ ಹಲವು ಮಾಹಿತಿಗಳನ್ನು ಹಂಚಿಕೊಂಡರು. ಆಸ್ಪತ್ರೆಗಳಲ್ಲಿ ಬೆಡ್ ವಿಚಾರ, ಪ್ರತಿ ನಿತ್ಯ ಆಗುತ್ತಿರುವ ಕೋವಿಡ್ ಹೆಚ್ಚಳ, ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ.
ಸಭೆಯಲ್ಲಿ ಸರ್ಕಾರದ ಮಾತುಗಳಿಗೆ ವಿರೋಧ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್ಲವನ್ನೂ ನಿರ್ವಹಿಸುತ್ತಿದ್ದೇವೆ ಎಂದು ಹೇಳುತ್ತೀರಿ. ಹಾಗಾದ್ರೆ ಬೆಂಗಳೂರಿನಲ್ಲಿ ಕೋವಿಡ್ ಏಕೆ ಹೆಚ್ಚಳ ಆಯ್ತು. ನಗರದಲ್ಲಿ ಕೋವಿಡ್ ಹೆಚ್ಚಾಗಲು ರಾಜ್ಯ ಸರ್ಕಾರವೇ ಕಾರಣ ಎಂದು ಕಿಡಿ ಕಾರಿದ್ದಾರೆ.
ವಿಪಕ್ಷದವರ ಆಕ್ಷೇಪಕ್ಕೆ ಮಧ್ಯ ಪ್ರವೇಶ ಮಾಡಿದ ಆರ್ ಅಶೋಕ್ ನಾವು ಇಲ್ಲಿ ಜಗಳ ಮಾಡಲು ಬಂದಿಲ್ಲ. ಕೋವಿಡ್ ನಿಯಂತ್ರಣವೇ ನಮ್ಮ ಗುರಿ. ಇದಕ್ಕೆ ನಿಮ್ಮ ಸಹಕಾರ ಅಗತ್ಯ ಎಂದರು.
ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ರಾಮಲಿಂಗ ರೆಡ್ಡಿ, ಲಾಕ್ ಡೌನ್ ಮಾಡುವುದಾದರೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡು ಮಾಡಿ. ವಿರೋಧ ಪಕ್ಷಗಳ ಜೊತೆ ಸೇರಿಕೊಂಡು ಉತ್ತಮ ಸಮಾಜಕ್ಕಾಗಿ ಕೆಲಸ ಮಾಡಿ ಎಂದು ಆಗ್ರಹಿಸಿದ್ದಾರೆ.