ಬಂಗಾರಪೇಟೆ: ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಎಂ.ಬಿ.ಮುನಿಯಪ್ಪ 2021-22ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಆಗಿದ್ದಾರೆ. ಈ ಬಾರಿ ರಾಜ್ಯದ ಅಗ್ನಿಶಾಮಕ ಇಲಾಖೆಯ 30 ಸಿಬ್ಬಂದಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಲಾಗಿದ್ದು, ಇವರಲ್ಲಿ ತಾಲೂಕಿನ ಎಂ.ಬಿ.ಮುನಿಯಪ್ಪ ಒಬ್ಬರಾಗಿದ್ದಾರೆ.
ನರಸಾಪುರದ ಬಳಿ ಇರುವ ಕರಡಿಬಂಡೆ ಗ್ರಾಮದಲ್ಲಿ ಜನಿಸಿದ ಇವರು, 1994ರಲ್ಲಿ ಬೆಂಗಳೂರಿನ ದಕ್ಷಿಣ ಅಗ್ನಿಶಾಮಕ ಠಾಣೆಯಲ್ಲಿ ಸೇವೆಗೆ ಸೇರಿದರು. ನಂತರ ಮಹದೇವಪುರದಲ್ಲಿ 17, ಹೊಸಕೋಟೆಯಲ್ಲಿ 5 ಮತ್ತು ಪ್ರಸ್ತುತ ಬಂಗಾರಪೇಟೆಯಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರ ಉತ್ತಮ ಸೇವೆ ಗುರುತಿಸಿರುವ ರಾಜ್ಯ ಸರ್ಕಾರ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಿದೆ.
ಇದನ್ನೂ ಓದಿ;- ಅತಿಥಿ ಉಪನ್ಯಾಸಕರಿಂದ ತರಗತಿ ಬಹಿಷ್ಕಾರ
ಎಂ.ಬಿ.ಮುನಿಯಪ್ಪರವರು ತಾಲೂಕಿನಲ್ಲಿ ನಡೆದ ಅಗ್ನಿ ಅಪಘಾತಗಳಲ್ಲಿ, ಪ್ರವಾಹದ ಸಂದರ್ಭದಲ್ಲಿ ಧೈರ್ಯದಿಂದ ಮುನ್ನುಗ್ಗಿ ಅನೇಕರನ್ನು ಕಾಪಾಡಿದ್ದಾರೆ. ಜೊತೆಗೆ ಅನೇಕ ಮೂಕ ಪ್ರಾಣಿಗಳನ್ನು ರಕ್ಷಣೆ ಮಾಡಿದ್ದಾರೆ. ಇತ್ತೀಚೆಗೆ ಸುರಿದ ಮಳೆಗೆ ಪಟ್ಟಣದ ಪಕ್ಕದಲ್ಲಿರುವ ಹುಣಸನಹಳ್ಳಿ ಬಳಿ ನೀರಿನಲ್ಲಿ ಸಿಕ್ಕಿಕೊಂಡಿದ್ದವರನ್ನು ಕಾಪಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಸಾಧನೆಯನ್ನು ಗುರುತಿಸಿ ರಾಷ್ಟ್ರಪತಿ ಪದಕಕ್ಕೆ ಶಿಫಾರಸು ಮಾಡಿರುವುದಾಗಿ ಇಲಾಖೆಯ ಮೂಲಗಳು ತಿಳಿಸಿವೆ
“ಅಗ್ನಿಶಾಮಕ ಸೇವೆಗೆ ಸೇರಿದಾಗಿನಿಂದ ಇಲಾಖೆಯ ಮೇಲಧಿಕಾರಿಗಳು ನೀಡುವ ಮಾರ್ಗದರ್ಶನದಂತೆ ಕೆಲಸ ಮಾಡುತ್ತಾ ಬಂದಿದ್ದೇನೆ. ಕೆಜಿಎಫ್ ಚಿನ್ನದ ಗಣಿಯಲ್ಲಿ 3 ಜನ ಮೃತಪಟ್ಟ ಸಂದರ್ಭದಲ್ಲಿ ಅವರ ಶವಗಳನ್ನು ಹೊರತೆಗೆದಿರುವುದು ನನ್ನ ಜೀವಮಾನದಲ್ಲಿ ಮರೆಯಲಾಗದ ಘಟನೆಯಾಗಿದೆ. ನನ್ನ ಸೇವೆಯನ್ನು ಗುರುತಿಸಿ ನನ್ನನ್ನು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಿರುವುದಕ್ಕೆ ಸರ್ಕಾರಕ್ಕೆ ಮತ್ತು ಮೇಲಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.”
●ಎಂ.ಬಿ.ಮುನಿಯಪ್ಪ, ಮುಖ್ಯಮಂತ್ರಿ ಪದಕ ವಿಜೇತ