ಕೋಲ್ಕತ : ‘ಬಹು ಸಹಸ್ರ ಕೋಟಿಯ ಶಾರದಾ ಮತ್ತು ರೋಸ್ ವ್ಯಾಲಿ ಚಿಟ್ ಫಂಡ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಮುಂದೆ ಕೋಲ್ಕತ ಪೊಲೀಸ್ ಕಮಿಷನರ್ ತತ್‌ಕ್ಷಣವೇ ಹಾಜರಾಗಬೇಕು; ಆದರೆ ತನಿಖೆ ಸಂಬಂಧ ಅವರ ಮೇಲೆ ಯಾವುದೇ ಬಲ ಪ್ರಯೋಗ ನಡೆಸಬಾರದು, ಅರೆಸ್ಟ್ ಮಾಡಬಾರದು’ ಎಂದು ಸುಪ್ರೀಂ ಕೋರ್ಟ್ ಇಂದು ಮಂಗಳವಾರ ನೀಡಿರುವ ತೀರ್ಪನ್ನು ಪಶ್ಚಿಮ ಬಂಗಾಲದ ಧರಣಿ ಸತ್ಯಾಗ್ರಹ ನಿರತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ‘ಅಡಿಗೆ ಬಿದ್ದರೂ ಮೂಗು ಮೇಲೆ’ ಎಂಬಂತೆ ಸ್ವಾಗತಿಸಿದ್ದಾರೆ.
‘ಸುಪ್ರೀಂ ಕೋರ್ಟಿನ ಈ ತೀರ್ಪು ದೇಶದ ಜನರ ವಿಜಯವಾಗಿದೆ; ಪ್ರಜಾಸತ್ತೆಯ ವಿಜಯವಾಗಿದೆ; ಈ ಹೋರಾಟದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರ ಗೆಲುವಾಗಿದೆ; ನಮಗೆ ನ್ಯಾಯಾಂಗ ಮತ್ತು ಪ್ರಜಾಸತ್ತೆಯ ಎಲ್ಲ ಸಂಸ್ಥೆಗಳ ಮೇಲೆ ಅಪಾರ ಗೌರವ ಇದೆ; ನಾವು ಈ ತೀರ್ಪು ನೀಡಿದ ಸುಪ್ರೀಂ ಕೋರ್ಟಿಗೆ ಆಭಾರಿಗಳಾಗಿದ್ದೇವೆ; ಕೃತಜ್ಞರಾಗಿದ್ದೇವೆ’ ಎಂದು ಸಿಎಂ ಮಮತಾ, ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿ ಹೇಳಿದ್ದಾರೆ.
ಕೋಲ್ಕತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಗೆ ತಮ್ಮ ಬೆಂಬಲವನ್ನು ಮುಂದುವರಿಸಿ ಮಾತನಾಡಿದ ಟಿಎಂಸಿ ಮುಖ್ಯಸ್ಥೆ ಮಮತಾ, “ಸಿಬಿಐ ತನಿಖೆಗೆ ತಾನು ಸಹಕರಿಸುವುದಿಲ್ಲ ಎಂದು ಪೊಲೀಸ್ ಕಮಿಷನರ್ ಎಂದೂ ಹೇಳಿರಲಿಲ್ಲ” ಎಂದು ರಾಗ ಬದಲಾಯಿಸಿದ್ದಾರೆ.
ಮುಂದುವರಿದು ಮಮತಾ, ಕೇಂದ್ರದ ವಿರುದ್ಧದ ತನ್ನ ವಾಕ್ ದಾಳಿಯನ್ನು ತೀವ್ರಗೊಳಿಸಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಸತ್ತೆಯ ಎಲ್ಲ ಸಂಸ್ಥೆಗಳನ್ನು ನಾಶ ಮಾಡುತ್ತಿದ್ದಾರೆ; ದ್ವೇಷದ ರಾಜಕಾರಣ ಅನುಸರಿಸುತ್ತಿದ್ದಾರೆ; ವಿಪಕ್ಷ ನಾಯಕರನ್ನು ರಾಜಕೀಯವಾಗಿ ಬೇಟೆಯಾಡುತ್ತಿದ್ದಾರೆ ‘ ಎಂದು ಆರೋಪಿಸಿದರು.
“ಸಿಬಿಐ ನವರು ಏನು ಮಾಡಲು ಹೊರಟಿದ್ದರು ? ಕೋಲ್ಕತ ಪೊಲೀಸ್ ಕಮಿಷನರ್ ರನ್ನು ಅರೆಸ್ಟ್ ಮಾಡಲು ಮುಂದಾಗಿದ್ದರು. ರಹಸ್ಯ ಕಾರ್ಯಾಚರಣೆಯಲ್ಲಿ ಅವರು ಕಮಿಷನರ್ ಮನೆಗೆ ಹೋಗಿದ್ದರು; ಯಾವುದೇ ನೊಟೀಸ್ ಕೊಡಲಿಲ್ಲ. ಈಗ ಸುಪ್ರೀಂ ಕೋರ್ಟ್ “ಕೋಲ್ಕತ ಪೊಲೀಸ್ ಕಮಿಷನರ್ ರನ್ನು ಬಂಧಿಸಕೂಡದು ಎಂದು ಹೇಳಿದೆ. ಅಂತೆಯೇ ನಾವು ಕೋರ್ಟಿಗೆ ಕೃತಜ್ಞರಾಗಿದ್ದೇವೆ. ಇದು ನಮ್ಮ ಅಧಿಕಾರಿಗಳ ನೈತಿಕ ಬಲವನ್ನು ಹೆಚ್ಚಿಸುತ್ತದೆ” ಎಂದು ಮಮತಾ ಹೇಳಿದರು.