ನವದೆಹಲಿ: ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮೀ ಮತ್ತು ಗಣೇಶ ದೇವರ ಚಿತ್ರಗಳನ್ನು ಮುದ್ರಿಸಬೇಕು. ಇದರಿಂದ ದೇಶದ ಅರ್ಥ ವ್ಯವಸ್ಥೆ ಬಲಗೊಳ್ಳಲಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೀಡಿರುವ ಹೇಳಿಕೆ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
“ಚುನಾವಣೆ ಹಿನ್ನೆಲೆಯಲ್ಲಿ ಆಪ್ ಮತ್ತು ಅದರ ಪಕ್ಷದ ನಾಯಕರ ಹಿಂದೂ ವಿರೋಧಿ ಮನಸ್ಥಿತಿಯನ್ನು ಮರೆಮಾಚಲು ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ,’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದಾರೆ.
“ಕೇಜ್ರಿವಾಲ್ ತಮ್ಮ ರಾಜಕೀಯ ಚದುರಂಗದಾಟಕ್ಕೆ ಹಿಂದೂ ದೇವತೆಗಳನ್ನು ದಾಳವಾಗಿಸಿಕೊಳ್ಳುತ್ತಿದ್ದಾರೆ,’ ಎಂದು ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ದೂರಿದ್ದಾರೆ.
ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ 200 ರೂ. ಮುಖಬೆಲೆಯ ನೋಟಿನ ಮೇಲೆ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವನ್ನು ಮುದ್ರಿಸಿ ಫೋಟೋಶಾಪ್ ಮಾಡಿರುವ ಚಿತ್ರವನ್ನು ಬಿಜೆಪಿ ನಾಯಕ ನಿತೇಶ್ ರಾಣೆ ಟ್ವೀಟ್ ಮಾಡಿ, “ನೋಟು ಹೀಗೆ ಇರಬೇಕು’ ಎಂದು ಬರೆದುಕೊಂಡಿದ್ದಾರೆ.
ಅದಕ್ಕೆ ಪೂರಕವಾಗಿ ಕಾಂಗ್ರೆಸ್ ನಾಯಕ ಸಲ್ಮಾನ್ ಅನೀಸ್ ಸೋಜ್ ನೋಟುಗಳ ಮೇಲೆ ಅಲ್ಲಾ, ಜೀಸಸ್ ಮತ್ತು ಬುದ್ಧನ ಚಿತ್ರಗಳನ್ನು ಮುದ್ರಿಸುವಂತೆ ಒತ್ತಾಯಿಸಿದ್ದಾರೆ. ಅವರ ಒತ್ತಾಯದ ವಿರುದ್ಧ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.