Advertisement
ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಒಂದು ಕಡೆ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ಶಾಮೀದ್ ಮನಿಯಾರ್ ಬಣ ಮತ್ತು ಮತ್ತೊಂದು ಕಡೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯ ಆಪ್ತರ ಬಣ ಪ್ರತೇಕ ಪ್ರತೇಕವಾಗಿ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿಕೆಯನ್ನು ಖಂಡಿಸಲಾಯಿತು. ಈ ಸಂದರ್ಭದಲ್ಲಿ ಬಸ್ ನಿಲ್ದಾಣ ಹಾಗೂ ರಸ್ತೆಯುದ್ದಕ್ಕೂ ನಿಂತಿದ್ದ ಜನರು ಕಾಂಗ್ರೆಸ್ ಪಕ್ಷದ ಬಣಗಳ ಪ್ರತೇಕ ಪ್ರತಿಭಟನೆ ಕಂಡು ಮನೋರಂಜನೆ ಪಡೆಯುವಂತಾಗಿತ್ತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮೀದ್ ಮನಿಯಾರ್ ಮಾತನಾಡಿ, ಶಾಸಕರಾಗಿರುವ ಜನಾರ್ದನ ರೆಡ್ಡಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡಿದ್ದಾರೆ. ಗೌರವಯುತವಾದ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳಿಗೆ ಈ ರೀತಿಯಾಗಿ ಹೇಳಿಕೆ ನೀಡುವ ಮೂಲಕ ಅಪಮಾನ ಮಾಡಿರುವುದು ಖಂಡನೀಯ. ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ 1 ವರ್ಷದ ಅವಧಿಯಲ್ಲಿಯೇ ಜನಪರ ಯೋಜನೆಗಳಾಗಿರುವ 5 ಯೋಜನೆಗಳನ್ನು ಜಾರಿ ಮಾಡಿ, ಜನರ ವಿಶ್ವಾಸವನ್ನು ಪಡೆದುಕೊಂಡಿದ್ದಾರೆ. ಜನರಿಂದ ಆಯ್ಕೆಯಾಗಿರುವ ಮುಖ್ಯಮಂತ್ರಿಗಳಿಗೆ ತಳಮಟ್ಟದಲ್ಲಿ ಹೇಳಿಕೆ ನೀಡುವುದು ತಪ್ಪು, ಕೂಡಲೇ ಶಾಸಕ ಗಾಲಿ ಜನಾರ್ದನ ರೆಡ್ಡಿಯವರು ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಹೋರಾಟಗಳನ್ನು ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
Related Articles
Advertisement
ಅನ್ಸಾರಿ ಆಪ್ತರ ಬಣದ ಪ್ರತಿಭಟನೆ
ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಬೆಂಬಲಿಗರು ಶಾಸಕ ಗಾಲಿ ಜನಾರ್ದನರೆಡ್ಡಿ ಸಿಎಂ ಅವರನ್ನು ಅವಹೇಳನಕಾರಿಯಾಗಿ ಟೀಕಿಸಿರುವುದು ಖಂಡನೀಯ ಕೂಡಲೇ ಕ್ಷಮೆ ಕೋರುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ವಿಠಲಾಪೂರ ಯಮನಪ್ಪ, ಸಣ್ಣಕ್ಕಿ ನೀಲಪ್ಪ, ರಾಚಪ್ಪ ಗುಂಜಳ್ಳಿ, ಮಾರೇಶ,ಹಾಜಿ,ಯಮನಪ್ಪ ದಳಪತಿ,ಆನಂದ,ರಾಜಮ್ಮ, ಸನಕ್ ಎಫ್. ರಾಘವೇಂದ್ರ, ಜುಬೇರ್, ನ್ಯಾಯವಾದಿ ಹುಸೇನಪ್ಪ ಹಂಚಿನಾಳ, ಮಲ್ಲಿಕಾರ್ಜುನ ತಟ್ಟಿ, ಬಾಬಣ್ಣ, ವೆಂಕಟೇಶ್ ಬಾಬು, ಶೇಖನಬಿ ಸಾಬ್ ಇದ್ದರು.
ಶಾಸಕ ರೆಡ್ಡಿ ವಿರುದ್ಧದ ಪ್ರತಿಭಟನೆಯ ನೇತೃತ್ವ ವಹಿಸಿರುವ ಶಾಮೀದ್ ಮನಿಯಾರ್ ಜತೆಗೆ ಯಾರು ತೆರಳದಂತೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮೊಬೈಲ್ ಸಂದೇಶ ಕಳಿಸಿದ್ದರಿಂದ ಮನಿಯಾರ್ ಹಾಗೂ ಅನ್ಸಾರಿ ಬಣಗಳ ಕಾರ್ಯಕರ್ತರು ಪ್ರತೇಕವಾಗಿ ಪ್ರತಿಭಟನೆ ನಡೆಸಿ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿದ ಪ್ರಸಂಗ ಜರುಗಿತು. ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಲಲಿತಾರಾಣಿ ಶ್ರೀರಂಗದೇವರಾಯಲು ಅವರ ಬಣ ಪ್ರತಿಭಟನೆಯಿಂದ ದೂರವಿದ್ದು ತಟಸ್ಥ ನಿಲುವು ಪ್ರದರ್ಶಿಸಿತು. ಈ ಮಧ್ಯೆ ಗಂಗಾವತಿಗೆ ಆಗಮಿಸಿದ್ದ ಸಂಸದ ಕೆ.ರಾಜಶೇಖರ ಹಿಟ್ನಾಳ, ಡಿಸಿಸಿ ಅಧ್ಯಕ್ಷ ಅಮರೇಗೌಡ ಭಯ್ಯಾಪೂರ ಸೇರಿ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿರುವುದು ಕಂಡು ಬಂತು.