Advertisement

ಸಿಎಂ ಬಹುಮತ ಸಾಬೀತು ಪಡಿಸಲಿದ್ದಾರೆ

09:31 PM Jul 14, 2019 | Lakshmi GovindaRaj |

ದೇವನಹಳ್ಳಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರ ಸುಭದ್ರವಾಗಿಯೇ ಇದೆ. ಐದು ವರ್ಷ ಪೂರ್ಣಗೊಳಿಸುತ್ತದೆ. ಬಹುಮತ ಸಾಬೀತು ಪಡಿಸುವಲ್ಲಿ ಕುಮಾರಸ್ವಾಮಿ ಯಶಸ್ಸು ಸಾಧಿಸುತ್ತಾರೆ ಎಂದು ಜೆಡಿಎಸ್‌ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಕೋಡಗುರ್ಕಿ ಸಮೀಪದಲ್ಲಿರುವ ಪ್ರಸ್ಟೀಜ್‌ ಗಾಲ್ಫ್ಶೈರ್‌ ರೆಸಾರ್ಟ್‌ಗೆ ತೆರಳುವ ವೇಳೆ ಹಲವು ಶಾಸಕರು ಮಾಧ್ಯಮದವರೊಂದಿಗೆ ಮಾತನಾಡಿ, ವಿಷಯ ಸ್ಪಷ್ಟಪಡಿಸಿದರು.

Advertisement

ಅತೃತ್ಪರ ಮನವೊಲಿಕೆ ವಿಶ್ವಾಸವಿದೆ: ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್‌ ಮಾತನಾಡಿ, ರಾಜ್ಯ ರಾಜಕೀಯ ಹಲವು ತಿರುವುಗಳನ್ನು ಪಡೆಯುತ್ತಿದೆ. ಎರಡೂ ಪಕ್ಷಗಳ ನಾಯಕರು ಅತೃಪ್ತರ ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿ ಉಸ್ತುವಾರಿ ಮುರಳಿಧರ್‌, ಈಶ್ವರಪ್ಪ ಭೇಟಿ ಆಕಸ್ಮಿಕವಾದುದು. ಇದಕ್ಕೆ ರಾಜಕೀಯ ಲೇಪನ ಬಳಿಯುವುದು ಸರಿಯಲ್ಲ.

ಅಲ್ಲದೆ ಅತೃಪ್ತ ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಜತೆಗೆ ಕೆಲ ಶಾಸಕರು ಇನ್ನೂ ನಾವು ಜನತಾದಳದಲ್ಲಿಯೇ ಇದ್ದೇವೆ. ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲರೂ ಒಟ್ಟಾಗಿ ಹೋಗುವ ಉದ್ದೇಶದಿಂದಲೇ ರೆಸಾರ್ಟ್‌ನಲ್ಲಿ ತಂಗಿದ್ದೇವೆ. ಜತೆಗೆ ಸೋಮವಾರ ಅಧಿವೇಶನವಿದ್ದು, ಎಲ್ಲರೂ ಹಾಜರಾಗುತ್ತೇವೆ ಎಂದು ಹೇಳಿದರು.

ಸರ್ಕಾರ 5 ವರ್ಷ ಪೂರೈಸುತ್ತದೆ: ವಿಧಾನ ಪರಿಷತ್‌ ಸದಸ್ಯ ಶರವಣ ಮಾತನಾಡಿ, ಸರ್ಕಾರ ಸುಭದ್ರವಾಗಿಯೇ ಇದೆ. ಮೈತ್ರಿ ಸರ್ಕಾರ, 5 ವರ್ಷ ಪೂರ್ಣಗೊಳಿಸುತ್ತದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಹುಮತ ಸಾಬೀತು ಮಾಡಲಿದ್ದಾರೆ. ಎಲ್ಲವೂ ಶುಭ ಸೂಚಕವಾಗಿಯೇ ಇದೆ. ಕುಮಾರಸ್ವಾಮಿ ಬಹುಮತ ಸಾಬೀತಿನಲ್ಲಿ ಜಯಶೀಲರಾಗುತ್ತಾರೆ.

ಭಗವಂತನ ಆಶೀರ್ವಾದದಿಂದ ಈ ಸರ್ಕಾರ ರಚನೆ ಆಗಿದೆ. ಈ ಸರ್ಕಾರ ಉಳಿಯುತ್ತೆ, ಜನರಿಗೆ ಉತ್ತಮ ಕೆಲಸ ಮಾಡಿಕೊಡುತ್ತದೆ. ಸುಧಾಕರ್‌ ಸೇರಿದಂತೆ ಯಾರ ನಡೆ ಬಗ್ಗೆ ನಾನು ಈಗ ಮಾತನಾಡೋದಿಲ್ಲ, ನಿಮಗೆಲ್ಲ ಶುಭ ಸೂಚನೆ ಸಿಗುತ್ತದೆ ಎಂದು ಹೇಳಿದರು.

Advertisement

ಶಾಸಕರ ಸಮನ್ವಯದ ಕೊರತೆ: ಮಳವಳ್ಳಿ ಶಾಸಕ ಅನ್ನದಾನಿ ಮಾತನಾಡಿ, ಆಯಾ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಸಹಜ. ಹಿಂದೆ ಸೋನಿಯಾ ಗಾಂಧಿ, ಗುಲಾಂ ನಬೀ ಅಜಾದ್‌ ನಿರ್ಧರಿಸಿದಂತೆ ಎಚ್‌.ಡಿ. ಕುಮಾರಸ್ವಾಮಿ 5 ವರ್ಷಗಳವರೆಗೆ ಮುಖ್ಯಮಂತ್ರಿಯಾಗಿಯೇ ಇರುತ್ತಾರೆ. ಎರಡು ಪಕ್ಷಗಳು ಸೇರಿ ಮೈತ್ರಿ ಸರ್ಕಾರ ನಡೆಸುವಾಗ ಭಿನ್ನಮತ ಸರ್ವೇ ಸಾಮಾನ್ಯ.

ಎಲ್ಲವೂ ಬಗೆಹರಿಸುವ ಸಾಮಾರ್ಥಯ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರಿಗಿದೆ. ಅವರೊಂದಿಗೆ ನಾವಿದ್ದೇವೆ. ಸರ್ಕಾರದ ಸಚಿವರ ಖಾತೆಗಳಲ್ಲಿ ಎಚ್‌.ಡಿ.ರೇವಣ್ಣ ಹಸ್ತಕ್ಷೇಪ ಆರೋಪ, ಕೆಎಎಸ್‌ ಮತ್ತು ಐಎಎಸ್‌ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಡುವಿನ ಸಮನ್ವಯ ಕೊರತೆ ಇದೆ.

ಭಿನ್ನಮತೀಯರ ಎಲ್ಲ ಬೇಡಿಕೆಗಳನ್ನು ಆಲಿಸಿ, ಹಿರಿಯ ನಾಯಕರು ಕ್ರಮಕೈಗೊಳ್ಳುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು. ಶ್ರವಣಬೆಳಗೋಳ ಶಾಸಕ ಬಾಲಕೃಷ್ಣ ಮಾತನಾಡಿ, ಮೋಜು ಮಸ್ತಿಗಾಗಿ ಶಾಸಕರು ರೆಸಾರ್ಟ್‌ ವಾಸ್ತವ್ಯ ಮಾಡ್ತಿಲ್ಲ. 14 ತಿಂಗಳು ಯಶಸ್ವಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರ ಆಡಳಿತ ನಡೆಸಿದೆ.

5 ವರ್ಷ ಆಡಳಿತ ನಡೆಸುವುದು ಖಚಿತ. ಕೆಲ ಶಾಸಕರು ಸ್ವಾರ್ಥಕ್ಕಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್‌ ಸೇರಿ, ಎಂಟಿಬಿ ಮನವೊಲಿಸಿದ್ದಾರೆ. ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸಮತಯಾಚನೆ ದಿನಾಂಕ ನಿಗದಿ ಮಾಡುವಂತೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಸಾರ್ವಜನಿಕರ ಹಣ ಬಳಸುತ್ತಿಲ್ಲ: ರೆಸಾರ್ಟ್‌ನ ಎಲ್ಲ ಖರ್ಚನ್ನು ಸ್ವಂತ ಹಣದಲ್ಲಿ ನಿಭಾಯಸುತ್ತಿದ್ದೇವೆ. ನಮಗೆ ವ್ಯವಸಾಯ, ಉದ್ದಿಮೆ ಸೇರಿದಂತೆ ಆದಾಯವಿದೆ. ಅದರಲ್ಲೇ ಎಲ್ಲ ಖರ್ಚುಗಳನ್ನು ಭರಿಸುತ್ತಿದ್ದೇವೆ. ಆ ಸಾಮರ್ಥ್ಯ ನಮಗಿದೆ. ರೆಸಾರ್ಟ್‌ನ ಒಂದು ವಿಲ್ಲಾಗೆ 30 ಸಾವಿರ ಇದ್ದು, 5 ಮಂದಿ ವಾಸ್ತವ್ಯ ಮಾಡಬಹುದು. ಯಾವುದೇ ಕಾರಣಕ್ಕೂ ಸಾರ್ವಜನಿಕರ ಹಣ ಬಳಸುತ್ತಿಲ್ಲ ಎಂದು ಶಾಸಕರು ತಿಳಿಸಿದರು. ಆದರೆ ಇತ್ತ ಜನರ ಕುಂದುಕೊರತೆ ಆಲಿಸದ ಶಾಸಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾರೆ.

Advertisement

Udayavani is now on Telegram. Click here to join our channel and stay updated with the latest news.

Next