ಹುಬ್ಬಳ್ಳಿ: ಸಿಎಂ ತಮ್ಮ ಮೇಲಿನ ಮುಡಾ ಹಗರಣದಿಂದ ನುಣುಚಿಕೊಳ್ಳಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ 15ಕ್ಕೂ ಹೆಚ್ಚು ಪ್ರಕರಣಗಳ ದಾಖಲೆಗಳನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಂತಹ ಯಾವುದೇ ಗೊಡ್ಡು ಬೆದರಿಕೆಗಳಿಗೆ ನಾವು ಹೆದರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹರಿಹಾಯ್ದರು.
ಶುಕ್ರವಾರ ಶಾಸಕ ಅರವಿಂದ ಬೆಲ್ಲದ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಇವರು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಮೇಲೆ 33 ಪ್ರಕರಣ ದಾಖಲಿಸಿದ್ದರು. ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವ ಕಾಂಗ್ರೆಸ್ ನಾಯಕರು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದರು.
ಮುಡಾ ಹಾಗೂ ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಮುಖ್ಯಮಂತ್ರಿ ನೇರವಾಗಿ ಶಾಮೀಲಾಗಿದ್ದಾರೆ. ಕಾರಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ ಎಂದರು.
ಮುಡಾ ಹಗರಣದಲ್ಲಿ ಸಿಎಂ ಅವರು ಭಾಗಿಯಾಗಿದ್ದು ದೆಹಲಿ ಮಟ್ಟದಲ್ಲಿ ಚರ್ಚೆಯಾಗಿದೆ. ಹೀಗಾಗಿ ಸಿದ್ದರಾಮಯ್ಯ ಶಾಸಕರ ಸಭೆ ನಡೆಸಿ ವಿಶ್ವಾಸಕ್ಕೆ ತೆಗೆದು ಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅವರ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಆದ್ದರಿಂದ ಅವರು ದೆಹಲಿ ನಾಯಕರ ಭೇಟಿಗೆ ಹೋಗಿದ್ದಾರೆ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬಂಡೆಗಲ್ಲು ಯಾವಾಗಲೂ ಸಿಎಂ ಜೊತೆ ಇರುತ್ತೇನೆ. ಇನ್ನೂ 10ವರ್ಷ ಅವರೇ ಇರುತ್ತಾರೆ ಎಂದು ಹೇಳುತ್ತಿರುವುದು ನೋಡಿದರೆ ಸಿಎಂ ಬದಲಾವಣೆ ವಿಚಾರದ ಕುರಿತು ಸಂಶಯಕ್ಕೆ ಎಡೆಮಾಡಿದೆ ಎಂದರು.
ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ಅನ್ನು ಬಿಜೆಪಿಯವರು ಮುಗಿಸುತ್ತಿದ್ದಾರೆ ಎಂಬ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರು ಯಾರನ್ನು ಮುಗಿಸುತ್ತಾರೆ ಎಂಬುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ. ಮುಖ್ಯಮಂತ್ರಿ ನಿಷ್ಕಳಂಕ ರಾಜಕಾರಣಿ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದ ಜನರಿಗೆ ಅವರು ಹಗರಣಗಳಲ್ಲಿ ಪಾತ್ರವಿರುವುದು ಗೊತ್ತಾಗಿದೆ ಎಂದರು.
ಸಿಎಂ ಹಾಗೂ ಡಿಸಿಎಂ ಅಧಿಕಾರಕ್ಕೆ ಬಂದು 15 ತಿಂಗಳಾದಋೂ ಉತ್ತರ ಕರ್ನಾಟಕದತ್ತ ಮುಖಮಾಡಿಲ್ಲ. ಅಲ್ಲಿನ ಜನರು ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಸರ್ಕಾರಕ್ಕೆ ಉತ್ತರ ಕರ್ನಾಟಕದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಹಲವಾರು ನೀರಾವರಿ ಯೋಜನೆ ತಂದಿದ್ದರು. ಅದಕ್ಕೂ ಸಹ ಇವರು ಕಲ್ಲು ಹಾಕಿದರು ಎಂದು ಆರೋಪಿಸಿದರು.