Advertisement
ನೂತನ ಪುಟಾಣಿ ರೈಲು ಡಿ. 23 ರಂದೇ ಕದ್ರಿ ಪಾರ್ಕ್‌ಗೆ ಆಗಮಿಸಿದೆ. ಮುಖ್ಯಮಂತ್ರಿಗಳೇ ರೈಲಿಗೆ ಚಾಲನೆ ನೀಡಬೇಕು ಎಂಬ ಉದ್ದೇಶದಿಂದಾಗಿ ಇಲ್ಲಿಯವರೆಗೆ ಹೊಸ ರೈಲಿಗೆ ಚಾಲನೆ ನೀಡಲಾಗಿಲ್ಲ. ಜ. 7ರಂದು ಮುಖ್ಯ ಮಂತ್ರಿ ಜಿಲ್ಲೆಗೆ ಆಗಮಿಸಲಿದ್ದು, ರೈಲು ಉದ್ಘಾಟಿಸಲಿದ್ದಾರೆ. ಆದರೆ ರೈಲು ಓಡಾಟಕ್ಕೆ ಬೇಕಾದ ಎಲ್ಲ ಕೆಲಸಗಳು ಮುಗಿಯದ ಹಿನ್ನೆಲೆಯಲ್ಲಿ ಓಡಾಟ ನಡೆಸಲು ಮಾತ್ರ ಸಾಧ್ಯವಾಗುತ್ತಿಲ್ಲ.
ಕದ್ರಿ ಪಾರ್ಕ್‌ನಲ್ಲಿ 1983ರಲ್ಲಿ ಓಡಾಟ ಆರಂಭಿಸಿದ್ದ ‘ಬಾಲಮಂಗಳ ಎಕ್ಸ್ ಪ್ರಸ್’ ಪುಟಾಣಿ ರೈಲು 2012ರ ವರೆಗೆ ನಿರಂತರವಾಗಿ ಮಕ್ಕಳ ಮನೋರಂಜನೆಯ ಭಾಗವಾಗಿತ್ತು. ಆದರೆ ಇಲ್ಲಿ ಓಡಾಡುತ್ತಿದ್ದುದು ಹಿಂದೆ ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿದ್ದ ರೈಲು, ಹೀಗಾಗಿ ಅದು ತೀರಾ ಹಳೆಯದಾಗಿತ್ತು. ಈ ಹಿನ್ನೆಲೆಯಲ್ಲಿ 2013ರಲ್ಲಿ ಪುಟಾಣಿ ರೈಲು ಓಡಾಟವನ್ನು ಸ್ಥಗಿತಗೊಳಿಸಲಾಗಿತ್ತು. 5 ವರ್ಷಗಳ ಕಾಲ
ಮಕ್ಕಳಿಗೆ ಕದ್ರಿ ಪಾರ್ಕ್‌ನಲ್ಲಿ ಪುಟಾಣಿ ರೈಲಿನ ಸವಾರಿ ಇಲ್ಲವಾಗಿತ್ತು.
Related Articles
ರೈಲ್ವೇ ಇಲಾಖೆಯಿಂದ ಈ ರೈಲು ನಿರ್ಮಾಣಗೊಂಡಿದ್ದು, ಒಟ್ಟು 1.35 ಕೋ. ರೂ. ವೆಚ್ಚದಲ್ಲಿ ತಯಾರಾಗಿದೆ. ಇದರಲ್ಲಿ 3 ಬೋಗಿಗಳಿದ್ದು ಆಕರ್ಷಕವಾಗಿದೆ. ನೂತನ ರೈಲು ನಿರ್ಮಾಣ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನದ ಮುಖಾಂತರ ಅನುದಾನ ಒದಗಿಸಲಾಗಿತ್ತು.
Advertisement
ಸೋಮವಾರದಿಂದ ಸಂಗೀತ ಕಾರಂಜಿಯ ನಿನಾದಕರಾವಳಿ ಜನತೆ ಬಹು ನಿರೀಕ್ಷೆಯಿಂದ ಕಾಯುತ್ತಿರುವ ಕದ್ರಿಯ ಜಿಂಕೆ ಪಾರ್ಕ್ ಎಂದೇ ಹೆಸರಾಗಿರುವ ಹಳೆ ಮೃಗಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ‘ರಾಜೀವ್ ಗಾಂಧಿ ಸಂಗೀತ ಕಾರಂಜಿ’ಯನ್ನು ಮುಖ್ಯ ಮಂತ್ರಿ ಉದ್ಘಾಟಿಸಲಿದ್ದಾರೆ. ಕಳೆದ ಎಪ್ರಿಲ್‌ನಲ್ಲಿಯೇ ಸಂಗೀತ ಕಾರಂಜಿ ಕಾಮಗಾರಿ ಪೂರ್ಣಗೊಂಡಿದ್ದರೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ)ದ ವಿಳಂಬ ನೀತಿಯಿಂದ ಉದ್ಘಾಟನೆಗೊಂಡಿರಲಿಲ್ಲ. ಹಲವು ಬಾರಿ ಇದರ ಪ್ರಾಯೋಗಿಕ ವೀಕ್ಷಣೆಯನ್ನೂ ನಡೆಸಲಾಗಿತ್ತು. ಪುಟಾಣಿ ರೈಲು ಮತ್ತು ಸಂಗೀತ ಕಾರಂಜಿ ಎರಡನ್ನೂ ಒಂದೇ ಬಾರಿಗೆ ಸಾರ್ವಜನಿಕರಿಗೆ ತೆರೆದಿಡುವ ಉದ್ದೇಶದಿಂದ ಇದನ್ನು ವಿಳಂಬ ಮಾಡಲಾಗಿದೆ. ಇದೀಗ ಕಾರಂಜಿ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಳ್ಳುತ್ತಿದ್ದು, ಸೋಮವಾರದಿಂದಲೇ ಪ್ರತಿದಿನ ಸಂಜೆ 6ರಿಂದ 8 ಗಂಟೆಯ ವರೆಗೆ ಸಾರ್ವಜನಿಕರಿಗೆ ಅವಕಾಶ ಒದಗಲಿದೆ. ಕರಾವಳಿ ಸಂಸ್ಕೃತಿ ಅನಾವರಣ
ಸಂಗೀತ ಕಾರಂಜಿ ಹಾಗೂ ಪುಟಾಣಿ ರೈಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜ. 7ರಂದು ಸಂಜೆ 7.30ಕ್ಕೆ ಚಾಲನೆ ನೀಡಲಿದ್ದಾರೆ. ರಾಜೀವ್ ಗಾಂಧಿ ಸಂಗೀತ ಕಾರಂಜಿಯ ಮೂಲಕ ಕರಾವಳಿ ಸಂಸ್ಕೃತಿ ಅನಾವರಣವಾಗಲಿದೆ. ಸಂಗೀತ ಕಾರಂಜಿಯಲ್ಲಿ ನೀರಿನ ನರ್ತನದ ಜತೆಗೆ ಜಿಲ್ಲೆಯ ಯಕ್ಷಗಾನ, ಭೂತಾರಾಧನೆ, ನಾಗಮಂಡಲ ಇತ್ಯಾದಿ ಸಂಸ್ಕೃತಿಯನ್ನು ಬಿಂಬಿಸುವ ಯೋಜನೆಯಿದೆ. ಜ. 7: ಪುಟಾಣಿ ರೈಲಿಗೆ ಚಾಲನೆ
ಜ. 7ರಂದು ಪುಟಾಣಿ ರೈಲಿಗೆ ಚಾಲನೆ ದೊರೆಯಲಿದೆ. ಆದರೆ ಶೆಡ್ ಪೈಂಟಿಂಗ್, ರೈಲ್ವೇ ಇಲಾಖೆಯ ಹಳಿ ಪರಿಶೀಲನೆ ಬಾಕಿ ಇರುವುದರಿಂದ ರೈಲು ಓಡಾಟ ಈಗ ಸಾಧ್ಯವಾಗುತ್ತಿಲ್ಲ. ಶೀಘ್ರ ಇವೆಲ್ಲ ಕೆಲಸಗಳನ್ನು ಮುಗಿಸಿ ಮಕ್ಕಳಿಗೆ ಪುಟಾಣಿ ರೈಲು ಸಂಚಾರವನ್ನು ಕಲ್ಪಿಸಲಾಗುವುದು.
– ಸುಂದರ ಪೂಜಾರಿ,
ಉಪ ನಿರ್ದೇಶಕರು, ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಧನ್ಯಾ ಬಾಳೆಕಜೆ