ಬೆಂಗಳೂರು: ರಾಜ್ಯದ ವಿದ್ಯಾವಂತ ಯುವ ಸಮೂಹಕ್ಕೆ ಸಮರ್ಪಕ ಕೌಶಲ್ಯ ತರಬೇತಿ ನೀಡುವುದರ ಜತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ನೀತಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಮ್ಮಿ ಕೊಂಡಿದ್ದ ಕೌಶಲ್ಯ ಕರ್ನಾಟಕ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮಲ್ಲಿರುವ ವಿದ್ಯಾವಂತ ಸಮೂಹಕ್ಕೆ ಅಗತ್ಯ ವಾದ ವೃತ್ತಿಪರ ಹಾಗೂ ಕೌಶಲ್ಯ ತರಬೇತಿ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೌಶಲ್ಯಾಭಿವೃದ್ಧಿ ನೀತಿ ಜಾರಿಗೊಳಿಸಿದ್ದು, ಈ ವರ್ಷ 5 ಲಕ್ಷ ಮಂದಿಗೆ ಕೌಶಲ್ಯ ತರಬೇತಿ ನೀಡುವುದರ ಜತೆಗೆ 1 ಲಕ್ಷ ಮಂದಿಗೆ ಉದ್ಯೋಗಾವಕಾಶ ಒದಗಿಸಿಕೊಡುವ ಗುರಿ ಹೊಂದಲಾಗಿದೆ
ಎಂದು ತಿಳಿಸಿದರು.
ಕೌಶಲ್ಯ ಕರ್ನಾಟಕ ನೋಂದಣಿ ಅಭಿಯಾನಕ್ಕೆ ರಾಜ್ಯ ಮಟ್ಟದಲ್ಲಿ ಚಾಲನೆ ನೀಡಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರು ಮತ್ತು ತಾಲೂಕು ಕೇಂದ್ರಗಳಲ್ಲಿ ಶಾಸಕರು ಚಾಲನೆ ನೀಡಿದ್ದಾರೆ. ಕೌಶಲ್ಯ ತರಬೇತಿಗೆ
ಯುವಕರು ಇಂದಿನಿಂದಲೇ ನೋಂದಣಿ ಮಾಡಿಕೊಳ್ಳಬಹುದು ಎಂದರು.
ಈ ಯೋಜನೆಯಡಿ 3 ತಿಂಗಳಿಂದ 6 ತಿಂಗಳ ಕಾಲ ಯುವಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಉಚಿತವಾಗಿ ತರಬೇತಿ ನೀಡಲಾಗುವುದು. ಕೇವಲ ವಿದ್ಯಾವಂತ ಯುವಕರಿಗೆ ಮಾತ್ರವಲ್ಲದೆ, ಕರಕುಶಲಕರ್ಮಿಗಳಿಗೂ ಆಧುನಿಕ ತಂತ್ರಜಾnನ ಅಳವಡಿಸಿಕೊಳ್ಳುವ ತರಬೇತಿ ನೀಡಲಾಗುವುದು. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಪಡೆದ ಯುವ ಜನತೆ ಸೇರಿದಂತೆ, ಉದ್ಯೋಗ ಬಯಸುವ ವರ ಸಂಖ್ಯೆ ರಾಜ್ಯದಲ್ಲಿ ಶೇ.50ರಷ್ಟಿದೆ.
ಅವರೆಲ್ಲರಿಗೂ ಹಂತಹಂತವಾಗಿ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದರು.
ನಂಬರ್ ಒನ್: ರಾಜ್ಯದಲ್ಲಿ ಬಂಡವಾಳ ಹೂಡಲು ಬಯಸುವ ಉದ್ಯಮಿಗಳ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿಯೇ ಬಂಡವಾಳ
ಹೂಡಲು ಆಸಕ್ತಿ ತಾಳಿದ್ದಾರೆ. ಇದರಿಂದ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ವಿದೇಶಿ ಬಂಡವಾಳ ಆಕರ್ಷಿಸುವಲ್ಲಿ 3ನೇ
ಸ್ಥಾನದಲ್ಲಿದೆ ಎಂದರು. ಕೌಶಲ್ಯ ಕರ್ನಾಟಕದ ರಾಯಭಾರಿ, ಚಿತ್ರ ನಟ ಪುನೀತ್ ರಾಜ್‌ಕುಮಾರ್ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಕೌಶಲ್ಯ ಕರ್ನಾಟಕ ಇಡೀ ದೇಶದಲ್ಲೇ ಹೆಮ್ಮೆ ಪಡುವಂತಹ ಕಾರ್ಯಕ್ರಮವಾಗಿದೆ ಎಂದರು.
ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಜವಳಿ ಸಚಿವ ರುದ್ರಪ್ಪ ಲಮಾಣಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಠಿಯಾ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ್ ಹಾಲಪ್ಪ, ಅಭಿವೃದ್ಧಿ ಆಯುಕ್ತ ವಿಜಯ್ ಭಾಸ್ಕರ್, ಕೌಶಲ್ಯಾಭಿವೃದ್ಧಿ ಇಲಾಖೆಯ ಅಪರ ಮುಖ್ಯ
ಕಾರ್ಯದರ್ಶಿ ಸಂಜೀವ್ ಕುಮಾರ್ ಉಪಸ್ಥಿತರಿದ್ದರು.