ಹಾಸನ: ಜಿಲ್ಲಾಡಳಿತವು ಕುಡಿಯುವ ನೀರಿನ ಅಭಾವ ಪರಿಹರಿಸಲು ಸಹಕರಿಸುತ್ತಿಲ್ಲ. ಅಧಿಕಾರಿಗಳು ಮನ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಯವರು ನೀಡಿದ ಆದೇಶವನ್ನು ಅಧಿಕಾರಿಗಳು ಕೇಳುವುದಿಲ್ಲವೆಂದರೆ ಮುಖ್ಯಮಂತ್ರಿಯವರಿಗೆ ನಾಚಿಕೆ ಆಗಲ್ಲವಾ? ಅವರಿಗೆ ಮರ್ಯಾದೆ ಇಲ್ಲವಾ ? ಇಂತಹ ಆಡಳಿತ ನಡೆಸಲು ಮುಖ್ಯಮಂತ್ರಿಯಾಗಬೇಕಾ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸೀಕೆರೆಯಲ್ಲಿ ಫೆ.18 ರಂದು ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವೀರಾವೇಶದಿಂದ ಮಾತನಾಡಿದರು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸದಿದ್ದರೆ ಡೀಸಿ, ಸಿಇಒ ಹೊಣೆ ಮಾಡಲಾಗುವುದು ಎಂದು ಗುಡುಗಿದ್ದರು. ಆದರೆ ಹಾಸನಕ್ಕೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದ್ದರೂ ಮೌನ ವಹಿಸಿರುವ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಯವರ ಮೇಲೆ ಏನು ಕ್ರಮ ಕೈಗೊಳ್ಳುತೀರಿ ಎಂದು ಪ್ರಶ್ನಿಸಿದರು.
ಪ್ರಾದೇಶಿಕ ಆಯುಕ್ತರಿಗೆ ಪೋನ್ ಮಾಡಿ ಕೇಳಿದರೆ, ಯಗಚಿಯಿಂದ ಹಾಸನಕ್ಕೆ ಬಿಡುತ್ತಿದ್ದ 20 ಕ್ಯೂಸೆಕ್ ನೀರನ್ನು ನಿಲ್ಲಿಸಲು ಹೇಳಿಲ್ಲ ಎನ್ನುತ್ತಾರೆ. ನೀರು ನಿಲ್ಲಿಸಿರುವುದೂ ಗೊತ್ತಿಲ್ಲ ಎನ್ನುತ್ತಾರೆ. ಇನ್ನೊಂದೆಡೆ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲು ಎಂಜಿನಿಯರುಗಳಿಗೆ ಹೇಳಿದ್ಧೇನೆ ಎನ್ನುತ್ತಾರೆ ಇಂಥ ಅಧಿಕಾರಿಗಳನ್ನಿಟ್ಟುಕೊಂಡು ಜನರ ಕುಡಿಯುವ ನೀರಿನ ಅಭಾವ ಪರಿಹರಿಸಲು ಸಾಧ್ಯವೇ ? ಐಎಎಸ್ ಅಧಿಕಾರಿಗಳೆಂದರೆ ಕಿರೀಟ ಹಾಕಿಕೊಂಡಿರುವ ರಾಜರೇ ? ಇನ್ನು ಹಾಸನ ಜಿಲ್ಲಾಧಿಕಾರಿ ಇದ್ದಾರೆ . ಅವರ ಆಡಳಿತದಲ್ಲಿ ದೇವರೇ ಹಾಸನ ಜಿಲ್ಲೆಯನ್ನು ಕಾಪಾಡಬೇಕು ಎಂದು ವ್ಯಂಗ್ಯವಾಡಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಒಬ್ಬ ಐಎಎಸ್ ಅಧಿಕಾರಿಗೆ ಫೋನ್‌ನಲ್ಲಿ ಹೇಳಿದ ಕೆಲಸ ಮಾಡಲಿಲ್ಲ ಎಂದು ಆ ಅಧಿಕಾರಿಯನ್ನು ಸಸ್ಪೆ$ಂಡ್ ಮಾಡಿದೆ. ಆನಂತರ ಎಲ್ಲಾ ಐಎಎಸ್ ಅಧಿಕಾರಿಗಳು ಬಂದು ನಿಮಗೆ ಸಹಕಾರ ನೀಡುವುದಿಲ್ಲ ಎಂಬ ಧಾಟಿಯಲ್ಲಿ ಬೆದರಿಸಲು ಬಂದರು. ಆಯ್ತು ಹಾಗೇ ಮಾಡಿ ಎಂದೆ. ಆದರೆ ಒಂದೂವರೆ ವರ್ಷ ಯಾವ ಐಎಎಸ್ ಅಧಿಕಾರಿಯೂ ಬಾಲ ಬಿಚ್ಚಲಿಲ್ಲ ಎಂದು ಉದಾಹರಿಸಿದರು.