ನ್ಯೂಜೆರ್ಸಿ : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಮೆರಿಕಾ ಪ್ರವಾಸದಲ್ಲಿದ್ದು,ವಿವಿಧ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ, ಆದಿಚುಂಚನಗಿರಿ ಮಠದ ವತಿನಿಂದ ನಿರ್ಮಾಣವಾಗುತ್ತಿರುವ ಕಾಲಭೈರವೇಶ್ವರ ದೇವಾಲಯದ ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಹೊರನಾಡಿಗರನ್ನು ಸಾಂಸ್ಕೃತಿಕವಾಗಿ ಒಂದಾಗಿಸಲು ಶ್ರದ್ಧಾ ಕೇಂದ್ರಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ಆದಿಚುಂಚನಗಿರಿ ಮಹಾಕ್ಷೇತ್ರ ನ್ಯೂಜೆರ್ಸಿಯಲ್ಲಿ ಸ್ಥಾಪಿಸುತ್ತಿರುವ ಶ್ರೀ ಕಾಲಭೈರೇಶ್ವರ ದೇವಾಲಯ ಒಂದು ಸ್ವಾಗತಾರ್ಹ ಹೆಜ್ಜೆ. ಇಂದು ಅದರ ಭೂಮಿ ಪೂಜೆ ಹಾಗೂ ಇತರೆ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಂಡೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.
ಸೋಮರ್‍ಸೆಟ್ ಎಂಬಲ್ಲಿ 20 ಎಕರೆ ಪ್ರದೇಶದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ನಿರ್ಮಿಸುತ್ತಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಭೂಮಿ ಪೂಜೆಗೆ ಸಂಬಂಧಿಸಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ , ಈ ದೇವಾಲಯವು ಭಾರತೀಯರ, ಅದರಲ್ಲೂ ಕನ್ನಡಿಗರಿಗೆ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳಲಿದೆ. ಹೊರನಾಡ ಕನ್ನಡಿಗರು ತಮ್ಮ ಬೇರನ್ನು ಬಲಪಡಿಸಲು, ಸಂಸ್ಕೃತಿಯೊಂದಿಗೆ ಬೆಸೆದುಕೊಳ್ಳಲು ಇಂತಹ ಸಾಂಸ್ಕೃತಿಕ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಇಲ್ಲಿ ನೆಲೆಸಿರುವ ಕನ್ನಡಿಗರು ಈ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ಮನಃಪೂರ್ವಕವಾಗಿ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಹೋಮ ಹವನ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಸ್ಥಳೀಯ ಕನ್ನಡಿಗರ ಸಂಘಟನೆಗಳ ಪದಾಧಿಕಾರಿಗಳು ಸಹ ಪಾಲ್ಗೊಂಡಿದ್ದರು.
ಈ ಶುಭ ಸಂದರ್ಭದಲ್ಲಿ ಗುಜರಾತ್ ರಾಜ್ಯದ ಪರಮಪೂಜ್ಯ ಶ್ರೀ ಪರಮಾತ್ಮಾನಂದ ಸರಸ್ವತಿ ಸ್ವಾಮಿಗಳವರು ಶ್ರೀ ಆದಿಚುಂಚನಗಿರಿ ಸಂಸ್ಥಾನದ ಎಲ್ಲಾ ಶಾಖಾಮಠಗಳ ಪೂಜ್ಯ ಸ್ವಾಮಿಗಳವರು ರಾಜ್ಯದ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಉಪಸ್ಥಿತರಿದ್ದರು.
ಅಮೆರಿಕಕ್ಕೆಸಚಿವ ಪುಟ್ಟರಾಜು,ಸಾ.ರಾ.ಮಹೇಶ್ ಸೇರಿ ಇತರರೊಂದಿಗೆ ತೆರಳಿದ ಸಿಎಂ ಎಚ್‌ಡಿಕೆ ಅವರನ್ನು ಸ್ಥಳೀಯ ಕನ್ನಡಿಗರು ಆದರದಿಂದ ಬರ ಮಾಡಿಕೊಂಡರು.