ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಎಚ್.ಡಿ.ಕುಮಾರಸ್ವಾಮಿ ಜನ ಮನವನ್ನು ಗೆಲ್ಲಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು ,ಸರ್ಕಾರದ ವತಿಯಿಂದ ನಡೆಯಬಹುದಾದ ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಮಾರ್ಗಸೂಚಿಗಳನ್ನು ಸಿದ್ದಪಡಿಸಿದ್ದಾರೆ.
ಹಣ ಉಳಿಸಲು ಯಾವೆಲ್ಲಾ ಕ್ರಮ ?
ತುರ್ತು ಅಗತ್ಯ ಹೊರತು ಪಡಿಸಿ ಎಲ್ಲಾ ಸಮಯದಲ್ಲಿ ಸಾಮಾನ್ಯ ವಿಮಾನದಲ್ಲಿ ಪ್ರಯಾಣ. ಸಚಿವಾಲಯಗಳು ಮತ್ತು ಸರ್ಕಾರಿ ಬಂಗಲೆಗಳ ಅನಗತ್ಯ ಬದಲಾವಣೆಗೆ ಬ್ರೇಕ್. ಅನಗತ್ಯ ಹೆಲಿಕ್ಯಾಪ್ಟರ್ ಪ್ರವಾಸಕ್ಕೆ ಬ್ರೇಕ್. ಈ ಹಿಂದಿನ ಮಂತ್ರಿಗಳು ಹಾಗೂ ಅಧಿಕಾರಿಗಳು ಬಳಸಿದ ಸುಸ್ಥಿಯಲ್ಲಿರುವ ಕಾರುಗಳನ್ನು ಬಳಸಲು ಸೂಚಿಸಿದ್ದು, ಹೊಸ ಹೊಸ ವಾಹನ ಖರೀದಿಗೆ ಬ್ರೇಕ್ .ಕಚೇರಿ ಹಾಗೂ ಅಧಿಕೃತ ನಿವಾಸಗಳಲ್ಲಿ ಅಗತ್ಯವಿರುವಷ್ಟೇ ಸಿಬಂದಿಗಳು ಮತ್ತು ಪರಿಚಾರಕರನಿಟ್ಟುಕೊಳ್ಳುವ ಮೂಲಕ ಕನಿಷ್ಠ ಭದ್ರತಾ ಸಿಬ್ಬಂದಿ ನಿಯೋಜಿಸಿಕೊಳ್ಳುವುದು. ಬೆಂಗಾವಲು ಪಡೆ ವಾಹನಗಳ ಸಂಖ್ಯೆ ಮತ್ತು ಸಿಬಂದಿಗಳ ಸಂಖ್ಯೆ ಇಳಿಕೆ. ಅನಗತ್ಯ ಸರ್ಕಾರಿ ಕಾರ್ಯಕ್ರಮದ ಜಾಹೀರಾತುಗಳಿಗೆ ಬ್ರೇಕ್.
ಪ್ರಧಾನಿ ಭೇಟಿಗೆ ಸಾಮಾನ್ಯ ವಿಮಾನ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದ ಸಿಎಂ ಎಚ್‌ಡಿಕೆ ಸಾಮಾನ್ಯ ವಿಮಾನದಲ್ಲೇ ಪ್ರಯಾಣಿಸಿದ್ದರು. ವಿಶೇಷ ವಿಮಾನದಲ್ಲಿ ನಾನು ತೆರಳಿದ್ದರೆ 80 ಲಕ್ಷ ರೂಪಾಯಿ ವ್ಯಯವಾಗುತ್ತಿತ್ತು, ನಾನು ಸಾಮಾನ್ಯ ವಿಮಾನದಲ್ಲಿ ಪ್ರಯಾಣಿಸಿ 79 ಲಕ್ಷ ಹಣ ಉಳಿಸಿರುವುದಾಗಿ ಸಿಎಂ ಹೇಳಿಕೊಂಡಿದ್ದರು.