Advertisement

ತಂತ್ರಜ್ಞಾನದಿಂದ ಇನ್ನಷ್ಟು ಪಾರದರ್ಶಕ ಆಡಳಿತ

06:00 AM Nov 17, 2018 | Team Udayavani |

ಬೆಂಗಳೂರು: ಆಸ್ತಿ ಮಾರಾಟ ಹಾಗೂ ಖರೀದಿ, ದಾಖಲೆಗಳ ಪರಿಶೀಲನೆ ಸೇರಿದಂತೆ ಉಪ ನೋಂದಾಣಾಧಿಕಾರಿಗಳ ಕಚೇರಿ ಪ್ರಕ್ರಿಯೆಗಳು ಸರಳೀಕರಣಗೊಳಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಭಿವೃದ್ಧಿಪಡಿಸಿರುವ ಕಾವೇರಿ-ಆನ್‌ಲೈನ್‌ ಸೇವೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಚಾಲನೆ ನೀಡಿದರು.

Advertisement

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಸೇವೆ ಲೋಕಾರ್ಪಣೆಗೊಳಿಸಿದ ಅವರು, ಜನಸಾಮಾನ್ಯರು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ  ಮಧ್ಯವರ್ತಿಗಳ ಹಾವಳಿ ಇಲ್ಲದೆ ತಮ್ಮ ಕೆಲಸ ಮಾಡಿಸಿಕೊಳ್ಳಲು ಇದು ನೆರವಾಗಲಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ನೆರವಿನಿಂದ ಇನ್ನಷ್ಟು ಪಾರದರ್ಶಕ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಮೌಲ್ಯ ಮೊಬೈಲ್‌ ಆ್ಯಪ್‌
ಸಾರ್ವಜನಿಕರು ಯಾವುದೇ ಸ್ಥಿರಾಸ್ತಿಯ ಮಾರ್ಗಸೂಚಿ ಮೌಲ್ಯ ತಿಳಿಯಲು ಅನುಕೂಲವಾಗುವಂತೆ “‌ಮೌಲ್ಯ’  ಎಂಬ ಹೆಸರಿನ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ . ರೈತರ ಸಾಲಮನ್ನಾ ಯೋಜನೆಯ ಮಾಹಿತಿಯನ್ನೂ ಕೂಡ ಆನ್‌ಲೈನ್‌ನಲ್ಲೇ ಕ್ರೋಢೀಕರಿಸಲಾಗುತ್ತಿದೆ. ಇದರಿಂದಾಗಿ ಈ ಯೋಜನೆಯ ಫ‌ಲ ನೇರವಾಗಿ ಅರ್ಹರಿಗೆ  ದೊರೆಯಲಿದೆ ಹೇಳಿದರು.

ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿ, ಕಂದಾಯ ಇಲಾಖೆ ಜನರಿಗೆ ಅತ್ಯಂತ ಸಮೀಪವಾದ ಇಲಾಖೆ. ನಾಗರಿಕ ಕೇಂದ್ರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಆಡಳಿತದಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನೋಂದಣಿ ಪೂರ್ವ ಡೇಟಾ ಎಂಟ್ರಿ
ಈ ಸೇವೆಯು ಸಾರ್ವಜನಿಕರು ಉಪನೋಂದಣಿ ಕಛೇರಿಗೆ ಅನೇಕ ಬಾರಿ ಅಲೆದಾಡುವುದು  ತಪ್ಪಿಸಿ ಆನ್‌ಲೈನ್‌ ಮೂಲಕ ದಸ್ತಾವೇಜ ನೋಂದಣಿಗೆ ಸಲ್ಲಿಸುವ ಅವಕಾಶ ಕಲ್ಪಿಸುತ್ತದೆ. ಸಾರ್ವಜನಿಕರು ನೋಂದಾಯಿಸಬೇಕಾದ ಆಸ್ತಿಯ ಎಲ್ಲಾ ವಿವರಗಳನ್ನು ನೋಂದಣಿ ಪೂರ್ವದಲ್ಲಿ ಆನ್‌ಲೈನ್‌  ಮೂಲಕ ನಮೂದಿಸಿಕೊಂಡು, ಮಾಹಿತಿಗಳನ್ನು ವೀಕ್ಷಿಸಿದ ನಂತರ ತಿದ್ದುಪಡಿ ಇದ್ದರೆ ಸರಿಪಡಿಸಿ ಸಂಬಂಧಪಟ್ಟ ದಾಖಲೆಗಳ ಸಲ್ಲಿಸಿ ಆನ್‌ಲೈನ್‌ನಲ್ಲೇ ನೋಂದಣಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ನಿಗದಿಪಡಿಸಿದ ಆಸ್ತಿಯ ಮಾರ್ಗಸೂಚಿ  ದರಗಳನ್ನು ತಂತ್ರಾಂಶದಲ್ಲಿ ಪಡೆದು, ದಸ್ತಾವೇಜಿಗೆ ಸಂಬಂಧಿಸಿದ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಿಕೊಳ್ಳಬಹುದು. ನಂತರ ನಿರ್ಧರಿಸಿದ ಮಾರುಕಟ್ಟೆ ಮೌಲ್ಯದ ಮಂಜೂರಾತಿಗಾಗಿ ಅರ್ಜಿಯನ್ನು ಉಪನೋಂದಣಾಧಿಕಾರಿಗಳಿಗೆ ಸಲ್ಲಿಸಬಹುದು. ನೋಂದಣಿ ಸಮಯ ಸಹ ಪಡೆದುಕೊಂಡು ಆ ಸಮಯಕ್ಕೆ ಸರಿಯಾಗಿ ಹೋಗಿ ನೋಂದಣಿ ಮಾಡಬಹುದು. ಇದರಿಂದ ಅಲ್ಲಿ ಹೋಗಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವುದು ತಪ್ಪುತ್ತದೆ ಎಂದು ಹೇಳಿದರು.

Advertisement

ಸಾರ್ವಜನಿಕರು ತಾವು ಮಾಡಿಕೊಳ್ಳುವ ಕರಾರು ಪತ್ರ ಮತ್ತು ಪ್ರಮಾಣ ಪತ್ರಗಳಿಗೆ ಮುದ್ರಾಂಕ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಿ, ಇ ಸ್ಟಾಂಪ್‌ ಕಾಗದವನ್ನು ತಮ್ಮ ಮನೆಯಿಂದಲೇ ಪ್ರಿಂಟ್‌ಔಟ್‌  ತೆಗೆದುಕೊಳ್ಳಬಹುದು ಎಂದು ಹೇಳಿದರು.

ಶಾಸಕರಾದ ರೋಷನ್‌ಬೇಗ್‌, ಎಚ್‌.ವಿಶ್ವನಾಥ್‌, ವಿಧಾನಪರಿಷತ್‌ ಸದಸ್ಯರಾದ ಎಚ್‌.ಎಂ.ರೇವಣ್ಣ, ಭೋಜೇಗೌಡ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾ ನಿರೀಕ್ಷಕ ಡಾ. ಕೆ.ವಿ. ತ್ರಿಲೋಕಚಂದ್ರ ಉಪಸ್ಥಿತರಿದ್ದರು.

ಏನಿದು ಕಾವೇರಿ ಆನ್‌ಲೈನ್‌
ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಸ್ಥಿರಾಸ್ತಿಗಳ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ ಮತ್ತು ಅಧಿಕಾರ ಪತ್ರಗಳನ್ನು ನೋಂದಣಿ  ಹಾಗೂ ದಾಖಲೆಗಳ ಭದ್ರತೆಯನ್ನು  ಕಾಪಾಡಿಕೊಂಡು ಅವುಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಸಂರಕ್ಷಿಸುವುದು. KAVERI Online ಮೂಲಕ   ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿ ಪೂರೈಸುವಿಕೆ, ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ ಪೂರೈಸುವಿಕೆ, ಒಂದು ವೇಳೆ ನಿರ್ದಿಷ್ಟ ಆಸ್ತಿಗಳ ಕುರಿತು ಋಣಭಾರಗಳನ್ನು ಪರಿಶೀಲಿಸಬೇಕಾದಲ್ಲಿ ಆಸ್ತಿಯ ವಿವರವನ್ನು ನೀಡಿ ನೈಜ ಸಮಯದಲ್ಲಿ ವಿವರಗಳನ್ನು ಪಡೆಯಬಹುದಾಗಿರುತ್ತದೆ. ಡಿಜಿಟಲ್‌ ಸಹಿ ಮಾಡಿದ ಋಣಭಾರ ಪ್ರಮಾಣ ಪತ್ರಗಳನ್ನು ಸಾರ್ವಜನಿಕರು ಆನ್‌ಲೈನ್‌  ಮೂಲಕ ಸೂಕ್ತ ಶುಲ್ಕವನ್ನು ಪಾವತಿಸುವ ಮೂಲಕ ಪಡೆಯಬಹುದಾಗಿರುತ್ತದೆ. ನೋಂದಾಯಿಸಿದ ದಸ್ತಾವೇಜಿನ ದೃಢೀಕೃತ ನಕಲನ್ನು ಪಡೆಯಲು ಸಾರ್ವಜನಿಕರು ಆನ್‌ಲೈನ್‌ನಲ್ಲಿ  ದಸ್ತಾವೇಜು ನೋಂದಾಯಿಸಿದ ಉಪನೋಂದಣಿ ಕಛೇರಿಯ ಹೆಸರನ್ನು ಆಯ್ಕೆ ಮಾಡಿ ದಸ್ತಾವೇಜಿನ ಸಂಖ್ಯೆ ನಮೂದಿಸಿ ಸೂಕ್ತ ಶುಲ್ಕವನ್ನು ಆನ್‌ಲೈನ್‌ನಲ್ಲೆ  ಪಾವತಿಸಿ ಪಡೆಯಬಹುದಾಗಿರುತ್ತದೆ.

ಸ್ಥಿರಾಸ್ತಿಗಳ ಮೌಲ್ಯ ಮತ್ತು ಮುದ್ರಾಂಕ ಶುಲ್ಕಗಳ ಲೆಕ್ಕ ಹಾಕುವಿಕೆ, ಸಾರ್ವಜನಿಕರು ತಮ್ಮ ಆಸ್ತಿಯ ವಿವರಗಳನ್ನು ತಂತ್ರಾಂಶದಲ್ಲಿ ನಮೂದಿಸಿ, ಆಸ್ತಿಯ ಮಾರ್ಗಸೂಚಿ ಮೌಲ್ಯವನ್ನು ಸ್ವತಃ ಲೆಕ್ಕ ಮಾಡಬಹುದು. ಹಾಗೂ ಪಾವತಿಸಬೇಕಾದ ಮುದ್ರಾಂಕ ಶುಲ್ಕವನ್ನು ಸರಳ ಮತ್ತು ಸುಲಭ ಹಂತಗಳಲ್ಲಿ ತಂತ್ರಾಂಶದಲ್ಲಿ ಲೆಕ್ಕ ಮಾಡಬಹುದಾಗಿರುತ್ತದೆ.

ಉಪ ನೋಂದಣಾಧಿಕಾರಿಗಳ ಕಚೇರಿ ಮಾಹಿತಿ
*ರಾಜ್ಯದ ಎಲ್ಲಾ 250 ಉಪನೋಂದಣಿ ಕಛೇರಿಗಳ ವಿಳಾಸದ ಮಾಹಿತಿಯು ಆನ್‌ಲೈನ್‌ ಪೋರ್ಟಲ್‌ನಲ್ಲಿ ಲಭ್ಯವಿದ್ದು, ಸಂಬಂಧಿಸಿದ ಕಾರ್ಯ ವ್ಯಾಪ್ತಿಯ ಉಪನೋಂದಣಿ ಕಛೇರಿಯಲ್ಲಿ ವಿವರವನ್ನು ಸಾರ್ವಜನಿಕರು ತಂತ್ರಾಂಶದಲ್ಲಿ ಪಡೆದುಕೊಳ್ಳಬಹುದಾಗಿರುತ್ತದೆ. ವಿವಾಹ ನೋಂದಣಿಗೆ ಸಂಬಂಧಿಸಿದಂತೆ ವಧು ಮತ್ತು ವರನ ವಿಳಾಸ ಹಾಗೂ ವಿವಾಹ ನೆರವೇರಿದ ಸ್ಥಳ ಆಧರಿಸಿ ವಿವಾಹವನ್ನು ನೋಂದಾಯಿಸಿಕೊಳ್ಳಬೇಕಾದ ಕಛೇರಿ ವಿವರಗಳನ್ನು ದೃಢಪಡಿಸಿಕೊಳ್ಳಬಹುದು. KACOMP ಕಾಯ್ದೆ ಅಡಿಯಲ್ಲಿ ಕೃಷಿ ಸಾಲಗಳಿಗೆ ಸಂಬಂಧಿಸಿದ ಡಿಕ್ಲರೇಷನ್‌ ಮತ್ತು ಸಾಲ ತೀರುವಳಿ ಪತ್ರಗಳು ಬ್ಯಾಂಕ್‌ ಹಾಗೂ ಸಹಕಾರ ಸಂಘಗಳ ಸಹಯೋಗದೊಂದಿಗೆ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next