ಉಡುಪಿ; ನಾನ್ ಯಾಕ್ರಿ ಟೆನ್ಶನ್ ಮಾಡಿಕೊಳ್ಳಬೇಕು. ನಾನು ಟೆನ್ಶನಲ್ಲಿ ಇದ್ದಿದ್ದರೆ ಉಡುಪಿಗೆ ಬರ್ತಾನೆ ಇರಲಿಲ್ಲ. ಬೆಂಗಳೂರಿನಲ್ಲಿ ಕುಳಿತು ರಾಜಕಾರಣ ಮಾಡುತ್ತಿದ್ದೆ…ಇದು ಶುಕ್ರವಾರ ಉಡುಪಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ.
ಕುಮಾರಸ್ವಾಮಿ ಅವರು ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಜಟಾಪಟಿ ಹಾಗೂ ಸರ್ಕಾರ ಅಭದ್ರತೆ ಎದುರಿಸುತ್ತಿದೆಯಾ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ಬೆಳಗಾವಿಯಲ್ಲಿ ಏನಾಗಿದೆ? ರೆಬೆಲ್ ಆದ 13 ಜನ ಯಾರು? ನೀವು ಈ ಪ್ರಶ್ನೆಯನ್ನು ರಮೇಶ್ ಜಾರಕಿಹೊಳಿ ಅವರನ್ನೇ ಕೇಳಿ. ನನಗ್ಯಾಕೆ ಟೆನ್ಶನ್. ನಮ್ಮ ಮೈತ್ರಿ ಸರ್ಕಾರ ಸುಭದ್ರವಾಗಿದೆ, ಯಾವುದೇ ಅಸಮಾಧಾನವೂ ಇಲ್ಲ. ಎಲ್ಲರೂ ನಮ್ಮ ಜೊತೆ ಸುಮಧುರ ಬಾಂಧವ್ಯದಿಂದ ಇದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಮಾಧ್ಯಮಗಳಲ್ಲಿ ಅನಗತ್ಯವಾಗಿ ಸರ್ಕಾರಕ್ಕೆ ಗಡುವು ನೀಡಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶಕ್ಕೆ ಹೋಗೋದು ತಪ್ಪಾ? ಅವರೇನು ಒಬ್ಬರೇ ಹೋಗಿದ್ದಾರಾ? ಎಂದು ಪ್ರಶ್ನಿಸಿದರು.
ಪರ್ಯಾಯ ಪಲಿಮಾರುಶ್ರೀ ಆಶೀರ್ವಾದ ಪಡೆದ ಸಿಎಂ:
ಪೂರ್ವನಿಗದಿತ ಭೇಟಿ ಕಾರ್ಯಕ್ರಮ ಇಲ್ಲದಿದ್ದರೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಪರ್ಯಾಯ ಪಲಿಮಾರುಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.