Advertisement

ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ​​​​​​​

12:30 AM Feb 17, 2019 | Team Udayavani |

ಬೆಂಗಳೂರು: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ವೀರಯೋಧರಿಗೆ ಶನಿವಾರವೂ ರಾಜ್ಯಾದ್ಯಂತ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಉಗ್ರರ ಹೀನಕೃತ್ಯ ಖಂಡಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಲಾಯಿತು. ಕೆಲವೆಡೆ ಪಾಕ್‌ ಧ್ವಜ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.ವೀರ ಯೋಧರ ಹತ್ಯೆ ಖಂಡಿಸಿ ಯಶವಂತಪುರ, ಕೆಂಗೇರಿ ಸೇರಿ ಬೆಂಗಳೂರಿನ ಹಲವೆಡೆ ಶ್ರದ್ಧಾಂಜಲಿ  ಸಭೆ ನಡೆಸಲಾಯಿತು.

Advertisement

ಪಾಕಿಸ್ತಾನದ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಲಾಯಿತು. ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ರಾಜ್ಯ ರೈತ ಸಂಘದ ಮುಖಂಡರು ವೀರ ಯೋಧರಿಗೆ ಮೇಣದಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಮಾರುಕಟ್ಟೆಯ ಹಮಾಲಿಗಳು ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಪುಷ್ಪನಮನಗಳನ್ನು ಸಲ್ಲಿಸಿ, ಮೌನ ಆಚರಿಸಲಾಯಿತು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹೆದ್ದಾರಿ ತಡೆ ಮಾಡಿ ಪ್ರತಿಭಟಿಸಿದರು. ರಾಮನಗರ ಜಿಲ್ಲೆ
ಮಾಗಡಿ, ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಹುತಾತ್ಮ ಯೋಧರಿಗೆ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಮನ ಸಲ್ಲಿಸಿದರು. ಕನಕಪುರದಲ್ಲಿ ಪತಂಜಲಿ ಯೋಗ ಶಿಬಿರದಿಂದ ಅಯ್ಯಪ್ಪ ಸ್ವಾಮಿ ದೇಗುಲದವರೆಗೆ ನೂರಾರು ಮಹಿಳೆಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಮೇಣದಬತ್ತಿ ಹಿಡಿದು ಉಗ್ರ ಸಂಘಟನೆ ವಿರುದ್ಧ ಧಿಕ್ಕಾರ ಕೂಗುತ್ತಾ, ಚೆನ್ನಬಸಪ್ಪ ವೃತ್ತದಲ್ಲಿ ವೀರ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು. “ವೀರ ಯೋಧ ಅಮರ್‌ ರಹೇ’ ಎಂಬ ಘೋಷಣೆಗಳನ್ನು ಕೂಗಲಾಯಿತು. ಪಾಕ್‌ ಧ್ವಜ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.

ತುಮಕೂರು ಜಿಲ್ಲೆ ಶಿರಾದಲ್ಲಿ ನಿವೃತ್ತ ಸೈನಿಕರು ಹಾಗೂ ಸಾರ್ವಜನಿಕರು ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ವೇಳೆ, ಶಿವಮೊಗ್ಗ, ದಾವಣಗೆರೆ, ಉಡುಪಿ, ರಾಯಚೂರು, ಬಾಗಲಕೋಟೆ, ಭದ್ರಾವತಿ, ಚಿತ್ರದುರ್ಗ, ಮೈಸೂರು ಸೇರಿ ರಾಜ್ಯದ ಇತರೆಡೆಯೂ ಶ್ರದ್ಧಾಂಜಲಿ ಸಭೆ, ಪ್ರತಿಭಟನೆಗಳು ನಡೆದವು.

ಪತಿಗೆ ಪತ್ನಿ ಲಾಸ್ಟ್‌ ಸೆಲ್ಯೂಟ್‌..!
ಮಂಡ್ಯ:
ಹುತಾತ್ಮನಾಗಿ ಬಂದ ಪತಿಗೆ ಗುರು ಪತ್ನಿ ಸೆಲ್ಯೂಟ್‌ ಹೊಡೆದು ಸ್ವಾಗತ ಕೋರಿದರು. ಪಾರ್ಥಿವ ಶರೀರ ಗುಡಿಗೆರೆ ಕಾಲೋನಿಯ ನಿವಾಸಕ್ಕೆ ಬಂದ ವೇಳೆ ಪತ್ನಿ ಕಲಾವತಿ ಸೆಲ್ಯೂಟ್‌ ಹೊಡೆದು ಗೌರವ ಸಲ್ಲಿಸಿದರು. ಮೃತ ಪತಿಗೆ ಪತ್ನಿ ಕೊಟ್ಟ ಗೌರ ವಕ್ಕೆ ನೆರೆದಿದ್ದ ಜನರು ಮೆಚ್ಚುಗೆ ಸೂಚಿಸಿದರು. ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಹೊತ್ತು ತಂದ ಸಿಆರ್ ಪಿಎಫ್‌ ಅಧಿಕಾ ರಿಗಳು ಗುರು ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿ, ಸಹಿ ಪಡೆದುಕೊಂಡರು. ಬಳಿಕ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿರಿಸಿದರೂ ಕುಟುಂಬದವರಿಗೆ ಗುರುವಿನ ಮುಖದರ್ಶನ ಸಿಗಲಿಲ್ಲ. ಮುಚ್ಚಿದ ಮರದ ಪೆಟ್ಟಿಗೆಯಲ್ಲೇ ತಂದೆ ಹೊನ್ನಯ್ಯ, ತಾಯಿ ಚಿಕ್ಕತಾಯಮ್ಮ, ಪತ್ನಿ ಕಲಾವತಿ, ಸಹೋದರರು ಪೂಜೆಸಲ್ಲಿಸಿದರು. ಹುತಾತ್ಮ ಯೋಧನ ದರ್ಶನಕ್ಕೆ ನೂಕು ನುಗ್ಗಲು ಉಂಟಾಗಿತ್ತು. ತ್ರಿವರ್ಣ ಧ್ವಜ ಹಿಡಿದು ಜೈಕಾರ ಕೂಗುತ್ತಾ ಸಾರ್ವಜನಿಕರು ದರ್ಶನಕ್ಕೆ ಮುಂದಾದರು.

Advertisement

ಉಪ್ಸಾರು ಮುದ್ದೆ ಊಟ ಎಂದ್ರೆ ಬಲು ಇಷ್ಟ…
ಮಂಡ್ಯ:
ಯೋಧ ಗುರು ಹುತಾತ್ಮರಾದ ಹಿನ್ನೆಲೆಯಲ್ಲಿ ಕೆ.ಎಂ.ದೊಡ್ಡಿಯ ಹಲವುಶಾಲಾ-ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿತ್ತು.  ಕೆ.ಎಂ.ದೊಡ್ಡಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಕಾಲೇಜು ಹಾಗೂ ಗುಡಿಗೆರೆ ಗ್ರಾಮದ ಸರ್ಕಾರಿ ಶಾಲೆಗೆ ರಜೆ ನೀಡಲಾಗಿತ್ತು. ಅಲ್ಲದೆ, ಕೆ.ಎಂ.ದೊಡ್ಡಿಯಲ್ಲಿ ಅಂಗಡಿ ಮಾಲೀಕರು ಸ್ವಯಂಘೋಷಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಶಶ್ರದ್ಧಾಂಜಲಿ ಅರ್ಪಿಸಿದರು.

ಸೊಪ್ಪು, ಉಪ್ಸಾರು ಮುದ್ದೆ ಊಟ ಇಷ್ಟ: ನನ್ನ ಮಗನಿಗೆ ಸೊಪ್ಪು, ಉಪ್ಸಾರು ಮುದ್ದೆ ಊಟ ಅಂದ್ರೆ ಬಹಳ ಇಷ್ಟ ಎಂದು ಮಗನನ್ನು ನೆನೆದು ಯೋಧ ಗುರುವಿನ ತಾಯಿ ಚಿಕ್ಕೋಳಮ್ಮ ಕಣ್ಣೀರು ಹಾಕಿದರು. ಊರಿಗೆ ಬರುವ ಮೊದಲೇ ಉಪ್ಸಾರು ಮಾಡು, ಖಾರವನ್ನು ನೀನೆ ಅರೆ ಎಂದು ಹೇಳುತ್ತಿದ್ದ. ಊರಿಗೆ ಬಂದಾಗ ಒಂದು ಕ್ಷಣವೂ ನನ್ನನ್ನು ಬಿಟ್ಟು ಇರುತ್ತಿರಲಿಲ್ಲ. ಅವ್ವ,ಅವ್ವ ಎಂದು ಹಿಂದೆ ಸುತ್ತುತ್ತಿದ್ದ. ನನ್ನ ಮಗನ ಮುಖ ತೋರಿಸಿ ಎಂದು ತಾಯಿ ಚಿಕ್ಕೋಳಮ್ಮ ಅಲವತ್ತುಕೊಳ್ಳುತ್ತಿದ್ದರು.  

ಅಂತ್ಯ ಸಂಸ್ಕಾರಕ್ಕೆ ನಂದಿನಿ ತುಪ್ಪ
ಗುರುವಿನ ಅಂತ್ಯಸಂಸ್ಕಾರಕ್ಕೆ 25 ಕೆಜಿ ನಂದಿನಿ ತುಪ್ಪವನ್ನು ಮಂಡ್ಯ ಜಿÇÉಾ ಹಾಲು ಒಕ್ಕೂಟ ಉಚಿತವಾಗಿ ನೀಡುವ ಮೂಲಕ ಔದಾರ್ಯತೆ ಮೆರೆದಿದೆ. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಿಗೆ 3 ಸಾವಿರ ಮಜ್ಜಿಗೆ ಪ್ಯಾಕೆಟ್‌, ಅಷ್ಟೇ ಪ್ರಮಾಣದ ಕುಡಿಯುವ ನೀರು ಪೂರೈಕೆ ಮಾಡಲಾಗಿತ್ತು.

ನೆರವಿನ ಮಹಾಪೂರ
ಯೋಧನ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ.ನೆರವು ನೀಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸುತ್ತಿದ್ದಂತೆ,ಜಿಲ್ಲೆಯ ರಾಜಕಾರಣಿಗಳು ಆರ್ಥಿಕ ನೆರವು ನೀಡಿ ಉದಾರತೆ ಮೆರೆದಿದ್ದಾರೆ. ತರೀಕೆರೆ ಶಾಸಕ ಗೋಪಿಕೃಷ್ಣ ಅವರು 1 ಲಕ್ಷ ರೂ.ನೆರವು ನೀಡಿದರು. ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ ವೈಯಕ್ತಿಕವಾಗಿ 50 ಸಾವಿರ ರೂ.ಆರ್ಥಿಕ ನೆರವು ನೀಡಿದ್ದು, ಗುರುವಿನ ತಾಯಿಗೆ ಚೆಕ್‌ ಹಸ್ತಾಂತರ ಮಾಡಿದರು. ಇದೇ ವೇಳೆ, ಎಲ್‌ಐಸಿ ದಾಖಲೆ ಪರಿಶೀಲಿಸದೆ ವಿಮಾ ಹಣ ನೀಡಿ ಮಾನವೀಯತೆ ಮೆರೆದಿದೆ.

ಮಂಡ್ಯ ಎಲ್‌ಐಸಿ ಶಾಖೆಯ ವ್ಯವಸ್ಥಾಪಕ ನಾಗರಾಜ್‌ ರಾವ್‌, ಯೋಧನ ಮನೆಗೆ ಭೇಟಿ ನೀಡಿ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಸಮ್ಮುಖದಲ್ಲಿ ಪತಿಯ ವಿಮಾ ಹಣ 3,82,000 ರೂ.ಗಳನ್ನು ಪತ್ನಿ ಕಲಾವತಿಗೆ ನೀಡಿದರು. ನಟ, ನಿಖೀಲ್‌ ಕುಮಾರಸ್ವಾಮಿ ವೈಯಕ್ತಿಕವಾಗಿ 1 ಲಕ್ಷ ರೂ.ನೆರವು ನೀಡಿದರು.

ಅಸ್ವಸ್ಥಗೊಂಡ ಪರಿವಾರಕ್ಕೆ ಚಿಕಿತ್ಸೆ
ಭಾರತೀನಗರ
: ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕಾಗಿ ಕಾದು ಬಸವಳಿದ ಗುರು ಸಂಬಂಧಿಕರು ಒಬ್ಬೊಬ್ಬರಾಗಿ ಅಸ್ವಸ್ಥರಾಗಿ ಬೀಳತೊಡಗಿದರು. ಮೊದಲಿಗೆ ಗುರು ಚಿಕ್ಕಮ್ಮ ಭಾಗ್ಯಮ್ಮ ಕುಸಿದು ಬಿದ್ದರು. ತಕ್ಷಣ ಅವರನ್ನು ತುರ್ತು ಚಿಕಿತ್ಸಾ ವಾಹನದ ಮೂಲಕ ಕೆ. ಎಂ.ದೊಡ್ಡಿ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ನೀಡಲಾಯಿತು. ನಂತರ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆಆಗಮಿಸಿ ಯೋಧನ ತಾಯಿ ಚಿಕ್ಕೋಳಮ್ಮ, ಪತ್ನಿ ಕಲಾವತಿ, ಸಹೋದರರಾದ ಮಧು, ಆನಂದ್‌, ತಂದೆ ಹೊನ್ನಯ್ಯ ಅವರ ಆರೋಗ್ಯ ಪರಿಶೀಲಿಸಿದರು. ಇದಾದ ಕೆಲಗಂಟೆಯಲ್ಲಿ ಭಾಗ್ಯಮ್ಮ ಪುತ್ರಿ ಸಂಗೀತಾ ಕುಸಿದು ಬಿದ್ದರು. ಅವರಿಗೂ ಕೂಡ ತುರ್ತು ಚಿಕಿತ್ಸೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next