ಮಂಡ್ಯ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾಳಿದ್ದು ರಾಜಿನಾಮೆ ನೀಡುತ್ತಾರೆ ಎನ್ನುತ್ತಿದ್ದಾರೆ. ಅದರ ಬಗ್ಗೆ ನನಗೆ ಗೊತ್ತಿಲ್ಲ.ಆದರೆ ದುಡ್ಡು ಹೊಡೆಯಲು ತರಾತುರಿಯಲ್ಲಿ ಯೋಜನೆಗಳಿಗೆ ಅನುಮತಿ ನೀಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ತಾಲೂಕಿನ ಸಮೀಪದ ಸತ್ತೇಗಾಲ ಬಳಿಯ ಕಾವೇರಿ ನದಿ ನೀರನ್ನು ಸುರಂಗ ಮಾರ್ಗದ ಮೂಲಕ ಇಗ್ಗಲೂರು ಬಳಿಯ ಎಚ್.ಡಿ.ದೇವೇಗೌಡ ಬ್ಯಾರೇಜ್‌ಗೆ ನೀರು ಹರಿಸುವ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತರಾತುರಿಯಲ್ಲಿ ಸಾವಿರಾರು ಕೋಟಿ ರೂ.ಗಳ ಯೋಜನೆಗೆ ಅನುಮತಿ ನೀಡುತ್ತಿದ್ದಾರೆ. ನೀರಾವರಿ ಇಲಾಖೆಯ ೪ ನಿಗಮಗಳಲ್ಲಿ ೧೨ ಸಾವಿರ ಕೋಟಿ ರೂ. ಯೋಜನೆಗೆ ಅನುಮತಿ ನೀಡಲಾಗುತ್ತಿದೆ. ಇವತ್ತಿನ ಸಭೆಯಲ್ಲಿ ಯಡಿಯೂರಪ್ಪ ಅನುಮತಿ ನೀಡುತ್ತಿದ್ದಾರೆ ಎಂದರು.
೧೨ ಸಾವಿರ ಕೋಟಿ ರೂ. ಯೋಜನೆಯಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಕೇವಲ ೧ ಸಾವಿರ ಕೋಟಿ ರೂ. ಮಾತ್ರ. ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಹಳೇ ಕರ್ನಾಟಕ ಭಾಗದಿಂದ ಹೋಗುತ್ತಿದೆ. ನನಗೆ ಹಳೇ ಕರ್ನಾಟಕ ಹೊಸ ಕರ್ನಾಟಕದ ಪ್ರಶ್ನೆ ಅಲ್ಲ. ಆ ಭಾಗಕ್ಕೆ ನೀಡುವ ಆದ್ಯತೆಯನ್ನು ಈ ಭಾಗಕ್ಕೂ ನೀಡಬೇಕು. ಇಲ್ಲಿನ ಜನ ನಿಮಗೇನು ದ್ರೋಹ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಈ ಭಾಗಕ್ಕೆ ೧ ಸಾವಿರ ಕೋಟಿ ರೂ., ಆ ಭಾಗಕ್ಕೆ ೧೧ ಸಾವಿರ ಕೋಟಿ ರೂ. ಯೋಜನೆಗೆ ಅನುಮತಿ ನೀಡಲಾಗುತ್ತಿದೆ. ನಿಜವಾಗಲೂ ಆ ಭಾಗದ ಜನರಿಗೆ ನೀರು ಕೊಡಲು ಯೋಜನೆ ರೂಪಿಸಿದ್ದೀರಾ? ಎಂದು ಪ್ರಶ್ನಿಸಿದ ಅವರು, ದುಡ್ಡು ಹೊಡೆಯುವ ಯೋಜನೆ ನಿಮ್ಮದು. ೨ ದಿನದಲ್ಲಿ ಸಿಎಂ ಬದಲಾಗುವುದಾದರೆ ತರಾತುರಿಯಲ್ಲಿ ೧೨ ಸಾವಿರ ಕೋಟಿ ರೂ. ಯೋಜನೆಗೆ ಅನುಮತಿ ನೀಡುತ್ತಿರುವುದು ಯಾಕೆ?, ಅವರಿಗೆ ಅಂಥ ಅನಿವಾರ್ಯ ಏನಿದೆ?, ಯಾವ ಕಾರಣಕ್ಕಾಗಿ ಈ ತೀರ್ಮಾನ?, ಈಗಲೂ ದುಡ್ಡು ಹೊಡೆಯಲಿಕ್ಕಾ, ರಾಜ್ಯದ ತೆರಿಗೆ ಹಣ ಲೂಟಿ ಮಾಡಲಿಕ್ಕಾ? ಎಂದು ಖಾರವಾಗಿ ಪ್ರಶ್ನಿಸಿದರು.
ಸಿಎಂ ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತಿರುವ ವಿಚಾರ ನನಗೆ ಸಂಬಂಧಿಸಿದ್ದಲ್ಲ. ಅದು ಬಿಜೆಪಿ ಆಂತರಿಕ ವಿಚಾರವಾಗಿದೆ. ಅವರ ಪಕ್ಷದ ನಿರ್ಧಾರದಲ್ಲಿ ನಾನು ಮೂಗು ತೂರಿಸುವುದು ಶೋಭೆ ತರುವುದಿಲ್ಲ. ಯಡಿಯೂರಪ್ಪ ಅವರಿಗೆ ಮಠಾಧೀಶರ ಬೆಂಬಲ ವಿಚಾರಕ್ಕೆ ನಾನು ಮಹತ್ವ ಕೊಡುವುದಿಲ್ಲ ಎಂದರು.
ಒಬ್ಬೊಬ್ಬರಲ್ಲಿ ಒಂದೊಂದು ಭಾವನೆ ಇದೆ. ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ಅವರ ಭಾವನೆ ಸರಿಯೋ ತಪ್ಪೋ ಎಂಬ ನಿರ್ಧಾರ ಮಾಡುವುದು ಜನರು. ಬಿಜೆಪಿಯಲ್ಲಿ ಸಿಎಂ ಬದಲಾವಣೆ ವಿಚಾರ ೨ ವರ್ಷಗಳಿಂದ ನಡೆಯುತ್ತಿದೆ. ಸದ್ಯ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂಥ ವಿಷಯಗಳಿಗೆ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಆದಷ್ಟು ಬೇಗ ಈ ವಾತಾವರಣ ತಿಳಿಗೊಳಿಸಿ ಉತ್ತಮ ಆಡಳಿತ ನೀಡಬೇಕು ಎಂದು ಬಿಜೆಪಿ ಹೈಕಮಾಂಡ್ ಸಲಹೆ ನೀಡಿದರು.
ನನಗೆ ಜಾತಿ ಇಲ್ಲ. ರಾಜ್ಯದ ಜನ ನನ್ನನ್ನ ಜಾತಿಯಿಂದ ಗುರುತಿಸಿಲ್ಲ. ನನ್ನಲ್ಲಿರುವ ತಾಯಿ ಹೃದಯದಿಂದ ಜನ ನನ್ನನ್ನ ಗುರುತಿಸಿದ್ದಾರೆ. ನಾನು ಜಾತಿಯ ಹೆಸರಲ್ಲಿ ರಕ್ಷಣೆ ಪಡೆಯುವುದಿಲ್ಲ. ನನಗೂ ಬೇರೆ ರಾಜಕಾರಣಿಗಳಿಗೂ ವ್ಯತ್ಯಾಸ ಇದೆ. ಜಾತಿ ಹೆಸರಿನಿಂದ ಪಕ್ಷ ಕಟ್ಟಲು ನಾನು ಹೋಗುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.