ಬೆಂಗಳೂರು: “ರಾಜ್ಯದಲ್ಲಿ ತೀವ್ರ ಮಳೆ ಅಭಾವ ತಲೆದೋರಿದ್ದು, ಜನ ಸಂಕಷ್ಟದಲ್ಲಿದ್ದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಯಾವ ಸಂದರ್ಭದಲ್ಲಿ ಪ್ರವಾಸ ಕೈಗೊಳ್ಳಬೇಕೆಂಬ ಪರಿಜ್ಞಾನ ಮುಖ್ಯಮಂತ್ರಿಗಳಿಗಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ಧಾಳಿ ನಡೆಸಿದರು.
ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಸೋಮವಾರ ಮಾತನಾಡಿದ ಅವರು, ರೋಮ್ ನಗರ ಹೊತ್ತಿ ಉರಿಯುವಾಗ ನೀರೋ ದೊರೆ ಪಿಟೀಲು ಬಾರಿ ಬಾರಿಸುತ್ತಿದ್ದ ಎಂಬ ರೀತಿಯಲ್ಲಿ ಮುಖ್ಯಮಂತ್ರಿಗಳು ವರ್ತಿಸುತ್ತಿದ್ದಾರೆ ಎಂದು ಕುಟುಕಿದರು.
ರಾಜ್ಯದ ರೈತ ಹಾಗೂ ಜನ ವಿರೋಧಿ ಸಮ್ಮಿಶ್ರ ಸರ್ಕಾರ, ವರ್ಗಾವಣೆ ದಂಧೆಯಲ್ಲೇ ಮುಳುಗಿದ್ದು, ತುಘಲಕ್ ದರ್ಬಾರ್ ನಡೆಸಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹತ್ತಾರು ಸಾವಿರ ಕೋಟಿ ರೂ. ಬಿಲ್ ಪಾವತಿ ಬಾಕಿಯಿದೆ. ಮುಖ್ಯವಾಗಿ ಲೋಕೋಪಯೋಗಿ, ನೀರಾವರಿ ಇಲಾಖೆಯಲ್ಲಿ ಭಾರೀ ಮೊತ್ತದ ಬಿಲ್ ಬಾಕಿಯಿದ್ದು, ಬಿಬಿಎಂಪಿಯಲ್ಲಿ 13,000 ಕೋಟಿ ರೂ. ಬಿಲ್ ಪಾವತಿ ಬಾಕಿ ಇದೆ ಎಂಬ ಮಾಹಿತಿ ಇದೆ.
ಇದೆಲ್ಲಾ ಹಿಂದೆ ಕೈಗೊಂಡ ಕಾಮಗಾರಿಗಳ ಬಿಲ್ ಬಾಕಿಯಾಗಿದ್ದು, ಹೊಸ ಕಾಮಗಾರಿ ಕೈಗೊಂಡಿಲ್ಲ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುತ್ತಿಲ್ಲ. ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನೇಮಕ ಪ್ರಕ್ರಿಯೆ ಕೂಡ ಸ್ಥಗಿತವಾಗಿದೆ. ಪ್ರತಿ ವರ್ಷ ನೇಮಕ ಪ್ರಕ್ರಿಯೆ ನಡೆಸಬೇಕೆಂಬ ಹೋಟಾ ಸಮಿತಿ ಆದೇಶವನ್ನೂ ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.
ಭೂಕಬಳಿಕೆ ನಿಯಂತ್ರಣ ಕಾಯ್ದೆ ಜಾರಿಗೆ ತಂದು ನಗರ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಾಯ್ದೆ ಹೆಸರಿನಲ್ಲಿ ಹತ್ತಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದವರಿಗೆ ಕಿರುಕುಳ ನೀಡಿ ಭೂಮಿ ವಶಕ್ಕೆ ಪಡೆಯಲಾಗುತ್ತಿದೆ.
ಕೊಡಗಿನಲ್ಲಿ ಪ್ಯಾರಾ ಒಲಂಪಿಕ್ ಕ್ರೀಡಾಪಟು ಸಂದೇಶ್ ಅವರಿಂದ ಮುಕ್ಕಾಲು ಎಕರೆ ಕಾಫಿ ತೋಟ ವಶಕ್ಕೆ ಪಡೆಯಲಾಗಿದೆ. ಕೂಡಲೇ ಈ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ತಿಳಿಸಿದರು. ವಿಧಾನಸಭೆ ಪ್ರತಿಪಕ್ಷ ಉಪನಾಯಕ ಗೋವಿಂದ ಕಾರಜೋಳ, ಮಾಜಿ ಸಚಿವ ಅರವಿಂದ ಲಿಂಬಾವಳಿ ಇತರರು ಉಪಸ್ಥಿತರಿದ್ದರು.
ಒಂದೆರಡು ದಿನದಲ್ಲೇ ರಾಜ್ಯ ಪ್ರವಾಸ: ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ನಿರತವಾಗಿರುವ, ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿರುವ ಬೇಜವಾಬ್ದಾರಿ ಸರ್ಕಾರವಿದ್ದು, ತೀವ್ರ ಬರದಿಂದ ಜನ ತತ್ತರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಒಂದೆರಡು ದಿನದಲ್ಲೇ ರಾಜ್ಯ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
ರಾಜ್ಯದ 81 ತಾಲೂಕುಗಳಲ್ಲಿ ಮಳೆಯ ತೀವ್ರ ಅಭಾವ ತಲೆದೋರಿದೆ. 62 ತಾಲೂಕುಗಳಲ್ಲಿ ಮಳೆಯಾಗಿದ್ದರೂ ಜನ, ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಹಾಗೂ ಬಿತ್ತನೆಗೆ ಸಹಕಾರಿಯಾಗಿಲ್ಲ ಎಂದರು.