ಸಕಲೇಶಪುರ: ಮುಖ್ಯಮಂತ್ರಿಯವರಿಗೂ, ಕೆಎಂಎಫ್ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಕಾನೂನು ಹಾಗೂ ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಟೀಕಾಪ್ರಹಾರ ನಡೆಸಿದರು. ಆಸೆ ಇಲ್ಲವೆಂದ ಮೇಲೆ ಚುನಾವಣೆ ಮುಗಿದ ಬಳಿಕ ಏಕೆ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದ್ರು ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಯವರಿಗೂ, ಕೆಎಂಎಫ್ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಯಡಿಯೂರಪ್ಪನವರು ವಿಶ್ವಾಸಮತ ಯಾಚನೆ ಮಾಡುವ ಸಂದರ್ಭದಲ್ಲಿ ರೇವಣ್ಣ ಪ್ಲ್ರಾನ್ ಮಾಡಿ, ಕೆಎಂಎಫ್ ಚುನಾವಣೆ ನಡೆಸೋಕೆ ಹೋಗಿದ್ರು ಎಂದು ಆರೋಪಿಸಿದರು. ಕೆಲವು ನಿರ್ದೇಶಕರನ್ನು ಹೈದ್ರಾಬಾದ್‌ಗೆ ಕರೆದೊಯ್ದಿದ್ದು ಯಾರು? ಅವರ ಮಟ್ಟಕ್ಕೆ ನಾವು ಇಳಿದಿಲ್ಲ. ಅವರು ಅವರ ಇಷ್ಟ ಬಂದ ಹಾಗೆ ಚುನಾವಣೆ ಮಾಡೋಕೆ ಹೋಗಿದ್ರು. ಅದಕ್ಕೆ ತಡೆ ಮಾಡಿ ಚುನಾವಣೆ ನಡೆಸಲಾಗಿದೆ ಅಷ್ಟೇ. ಇದರಲ್ಲಿ ಏನು ಪಿತೂರಿ ಇದೆ ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ಬಂಧನ ರಾಜಕೀಯ ಪ್ರೇರಿತ ಅಲ್ಲ. ಡಿ.ಕೆ.ಶಿವಕುಮಾರ್ ಬಂಧನವಾದ್ರೆ ಸಾರ್ವಜನಿಕವಾಗಿ ಅವರು ಅನುಕಂಪ ಗಿಟ್ಟಿಸಿಕೊಳ್ಳುತ್ತಾರೆ ಅನ್ನೋದು ನಮಗೆ ಗೊತ್ತು. ಈಗ ಅವರು ಅದನ್ನೇ ಮಾಡುತ್ತಿದ್ದಾರೆ. ಯಾವುದೇ ತನಿಖಾ ಸಂಸ್ಥೆ ತನಿಖೆಗೆ ಸಹಕರಿಸದಿದ್ದರೆ ಬಂಧಿಸೋದು ಸಹಜ. ತನಿಖಾ ಹಂತದಲ್ಲಿ ಸಹಕಾರ ನೀಡಿಲ್ಲ ಎಂದು ಬಂಧಿಸಲಾಗಿದೆ.
-ಜೆ.ಸಿ.ಮಾಧುಸ್ವಾಮಿ, ಕಾನೂನು ಹಾಗೂ ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ.