ತುಮಕೂರು: ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರಿ ಶಾಲೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದಾರೆ. ಆದರೆ ಈ ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿ ಯಲ್ಲಿ ಜಿಲ್ಲೆಯಲ್ಲಿ ಮಾಡಿರುವ ಗ್ರಾಮ ವಾಸ್ತವ್ಯದ ಚಿತ್ರಣ ಇಲ್ಲಿದೆ.
ಈ ಹಿಂದೆ ಗ್ರಾಮವಾಸ್ತವ್ಯ ಮಾಡಿದ್ದ ಗ್ರಾಮಗಳಲ್ಲಿ ಏನೆಲ್ಲ ಕೆಲಸವಾಗಿದೆ. ಕೊಟ್ಟ ಭರವಸೆಗಳು ಈಡೇರಿಲ್ಲ. ನೀಡಿದ ಮನವಿಗಳಲ್ಲಿ ಮನವಿಗಳಲ್ಲಿ ಕೆಲವು ಮಾತ್ರ ಈಡೇರಿದ್ದು, ಜಿಲ್ಲೆಯ ಶಿರಾ ತಾಲೂಕಿನ ಹೊನ್ನ ಗೊಂಡನಹಳ್ಳಿ, ತುರುವೇಕೆರೆ ತಾಲೂಕಿನ ಪುರಾ, ಮಧುಗಿರಿ ತಾಲೂಕಿನ ಸೋದೇನಹಳ್ಳಿ, ಪಾವಗಡ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ, ಆಶ್ವಾಸನೆಗಳ ಸುರಿಮಳೆ ಸುರಿಸಿದ್ದರು. ಅದರಲ್ಲಿ ಎಷ್ಟು ಈಡೇರಿವೆ ಎಂದು ಗ್ರಾಮಸ್ಥರನ್ನು ಕೇಳಿದರೆ ‘ಬಂದು ಹೋದರು ಸ್ವಾಮಿ ಏನು ಬದಲಾಗಲಿಲ್ಲ’ ಎನ್ನುತ್ತಾರೆ.
ಎಲ್ಲೆಲ್ಲಿ ಗ್ರಾಮವಾಸ್ತವ್ಯ ಮಾಡಿದ್ದರು: ಜಿಲ್ಲೆಯ ಶಿರಾ ತಾಲೂಕಿನ ಹೊನ್ನಗೊಂಡನಹಳ್ಳಿ, ಚಿಕ್ಕಣ್ಣ ಎಂಬುವರ ಮನೆಯಲ್ಲಿ 2006ರ ಡಿ.21 ಮತ್ತು 22ರಂದು ವಾಸ್ತವ್ಯ ಹಾಗೂ ಸಮಾಜ ಕಲ್ಯಾಣಖೆಯ ಹಿಂದುಳಿದ ಹಾಸ್ಟೆಲ್ನಲ್ಲಿ ಜನಸಂಪರ್ಕ ಸಭೆ ನಡೆಸಿದ್ದರು. ಸಿಎಂ ವಾಸ್ತವ್ಯ ಮಾಡಿದ ದಿನದಿಂದ ಇಲ್ಲಿಯವರೆಗೂ ಗ್ರಾಮ ಅಭಿವೃದ್ಧಿ ಆಗಿಲ್ಲ. ಮದಲೂರು ಕೆರೆಗೆ ನೀರು ಹರಿಸುತ್ತೇನೆ ಎಂದು ಹೇಳಿದ್ದರು. ಅದೂ ಸರಿಯಾಗಿ ಅನುಷ್ಠಾನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಈಡೇರಿಲ್ಲ ಆಶ್ವಾಸನೆ: ತುರುವೇಕೆರೆ ತಾಲೂಕಿನ ಪುರಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ 2007ರ ಆ.18 ಮತ್ತು 19ರಂದು ಗ್ರಾಮವಾಸ್ತವ್ಯ ಮಾಡಿದ್ದರು. ಪುರಾ ಗ್ರಾಮದಲ್ಲೂ ಇಲ್ಲಿವರೆಗೂ ಯಾವ ಅಭಿವೃದ್ಧಿ ಆಗಿಲ್ಲ. ಒಂದಿಷ್ಟು ಜನರಿಗೆ ವೃದ್ಧಾಪ್ಯ ವೇತನ ಕೊಡಿಸಿದನ್ನು ಬಿಟ್ಟರೆ, ರಸ್ತೆ ಅಭಿವೃದ್ಧಿ, ಶಾಲಾ ಕಟ್ಟಡ ನಿರ್ಮಾಣ ಆಶ್ವಾಸನೆ ಈಡೇರಲಿಲ್ಲ. ಮಧುಗಿರಿ ತಾಲೂಕಿನ ಸೋದೇನಹಳ್ಳಿ ಗ್ರಾಮದ ಅಂಜನಮ್ಮ ಎಂಬುವವರ ಮನೆಯಲ್ಲಿ 2007 ಜು.3 ಮತ್ತು 4ರಂದು ಗ್ರಾಮ ವಾಸ್ತವ್ಯ ಮಾಡಿದ್ದರು. ಈ ಗ್ರಾಮದಲ್ಲಿ ಪದವಿಪೂರ್ವ ಕಾಲೇಜು, ಪಶು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವುದಾಗಿ ನೀಡಿದ ಭರವಸೆ ಹಾಗೆಯೇ ಇದೆ. ಅಂಜಮ್ಮನಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್‌ವೆಲ್ ಕೊರೆಸಿ ಕೊಡುತ್ತೇವೆ ಎಂದು ಹೇಳಿ ಅದನ್ನೂ ಮಾಡಿಸಲಿಲ್ಲ.
ಜಿಲ್ಲೆಯಲ್ಲಿ ಒಟ್ಟು ನಾಲ್ಕು ತಾಲೂಕಲ್ಲಿ ಮಾಡಿದ್ದ ಗ್ರಾಮ ವಾಸ್ತವ್ಯದಿಂದ ಕೆಲವರಿಗೆ ಸಣ್ಣಪುಟ್ಟ ಪ್ರಯೋಜನವಾಗಿರುವುದು ಬಿಟ್ಟರೆ, ಉಳಿದ ಯಾವುದೇ ಆಶ್ವಾಸನೆ ಈಡೇರಿಲ್ಲ. ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ಗ್ರಾಮವಾಸ್ತವ್ಯ ಮಾಡಲು ನಿರ್ಧರಿಸಿ ದ್ದಾರೆ. ಜೊತೆಗೆ ಅಲ್ಲಿಯೇ ಜನಸಂಪರ್ಕ ಸಭೆ ನಡೆಸಿ ಜನರ ಅಹವಾಲು ಸ್ವೀಕರಿಸುತ್ತಿದ್ದಾರೆ. ಈ ಬಾರಿ ಬದಲಾವಣೆ ನಿರೀಕ್ಷೆಯಲ್ಲಿ ಜನರಿದ್ದು, ನಾಡಿನ ದೊರೆ ಜನರ ಆಶೋತ್ತರ ಈಡೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
● ಚಿ.ನಿ.ಪುರುಷೋತ್ತಮ್