Advertisement

ವೈಫ‌ಲ್ಯ ಮರೆಮಾಚಲು ಸಿಎಂ ಗ್ರಾಮವಾಸ್ತವ್ಯ: ಕೋಟ

10:04 AM Jun 22, 2019 | keerthan |

ಉಡುಪಿ: ರಾಜ್ಯದ ಸಮ್ಮಿಶ್ರ ಸರಕಾರದ ಆಡಳಿತ ನಿಷ್ಕ್ರಿಯವಾಗಿದೆ. ಬರ ನಿರ್ವಹಣೆ, ರೈತರ ಸಮಸ್ಯೆ ಪರಿಹರಿಸುವಲ್ಲಿ ಸೋತಿದೆ. ವೈಫ‌ಲ್ಯವನ್ನು ಮರೆ ಮಾಚುವುದಕ್ಕಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.

Advertisement

ಶುಕ್ರವಾರ ಉಡುಪಿಯಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು “ಪಂಚತಾರಾ ಹೊಟೇಲ್‌ಗ‌ಳಲ್ಲೇ ಉಳಿದುಕೊಂಡಿದ್ದವರು ಗ್ರಾಮಗಳಿಗೆ ಬರು ತ್ತಿದ್ದಾರೆ. ಅವರಿಗೆ ಬಡವರ ನೋವು ಗೊತ್ತಾಗದು ಎಂದರು. ದೇವೇಗೌಡ ಮತ್ತು ಎಚ್‌.ವಿಶ್ವನಾಥ್‌ ಅವರ ಹೇಳಿಕೆ, ಕಾಂಗ್ರೆಸ್‌ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಬಹುತೇಕ ಈ ಸರಕಾರ ಹೆಚ್ಚು ಸಮಯ ಬಾಳಿಕೆ ಬರುವ ವಾತಾವರಣ ಕಾಣುತ್ತಿಲ್ಲ. ಜನರು ಕೂಡ ಈ ಸರಕಾರ ಉರುಳುವುದನ್ನೇ ಬಯಸುತ್ತಿದ್ದಾರೆ’ ಎಂದರು.

ಸರಕಾರ ಆಡಳಿತ ನಡೆಸುವ ಸ್ಥಿತಿಯಲ್ಲಿಯೇ ಇಲ್ಲ. ಕೇಂದ್ರ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿಲ್ಲ. ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ದುರಂತವನ್ನು ನೆನಪಿಟ್ಟುಕೊಂಡು ಈ ವರ್ಷ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಸಚಿವರು ವಿಧಾನಸೌಧದ ಕಚೇರಿಗೆ ಬರುತ್ತಿಲ್ಲ. ಒಂದಿಬ್ಬರು ಸಚಿವರನ್ನು ಹೊರತುಪಡಿಸಿದರೆ ಇತರ ಸಚಿವರು ಜಿಲ್ಲಾ ಕೇಂದ್ರಗಳಿಗೂ ಹೋಗುತ್ತಿಲ್ಲ. ಚುನಾವಣೆ ಬಂದರೆ ಎದುರಿಸುವುದು ಹೇಗೆ ಎಂಬ ಯೋಚನೆಯಲ್ಲಿದ್ದಾರೆ ಎಂದು ಪೂಜಾರಿ ಟೀಕಿಸಿದರು.

ಜೆಡಿಎಸ್‌, ಕಾಂಗ್ರೆಸ್‌ ಸಿದ್ಧವೆ?
ಜನರು ಶಾಸಕರನ್ನು 5 ವರ್ಷಗಳ ಅವಧಿಗೆ ಆಯ್ಕೆ ಮಾಡಿದ್ದಾರೆ. ಹಾಗಾಗಿ ಅವರು ಒಂದೇ ವರ್ಷಕ್ಕೆ ರಾಜೀನಾಮೆ ಕೊಡುವ ಮನಸ್ಥಿತಿಯಲ್ಲಿ ಇರಲಾರರು. ಜೆಡಿಎಸ್‌, ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ ಎಂಬುದು ತಿಳಿಯಬೇಕಿದೆ. ಬಿಜೆಪಿ ಎಲ್ಲ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಿಜೆಪಿಯ ಕೇಂದ್ರ ನಾಯಕರು ಸೂಕ್ತ ನಿರ್ಧಾರ ತೆಗೆದು ಕೊಳ್ಳಲಿದ್ದಾರೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

ಹೋರಾಟ ನಿರಂತರ
ಐಎಂಎ ವಂಚನೆ, ಜಿಂದಾಲ್‌ಗೆ ಭೂಮಿ ವಿರುದ್ಧ ಬಿಜೆಪಿ ಹೋರಾಟ ನಡೆಸಿದೆ. ಇದುವರೆಗೆ ಅಲ್ಪಸಂಖ್ಯಾಕರು ಅವರ ರಕ್ಷಣೆಗೆ ಕಾಂಗ್ರೆಸ್‌, ಜೆಡಿಎಸ್‌ ಇದೆ ಎಂದು ತಿಳಿದಿದ್ದರು. ಆದರೆ ಐಎಂಎಂ ಪ್ರಕರಣದಲ್ಲಿ ಸಚಿವರು, ಶಾಸಕರು ಆರೋಪಿ ಮನ್ಸೂರ್‌ ಜತೆಗೆ ಭಾಗಿಯಾಗಿರುವುದರಿಂದ ಅಲ್ಪಸಂಖ್ಯಾಕರು ಇವೆರಡೂ ಪಕ್ಷಗಳ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ. ಯಡಿಯೂರಪ್ಪ ಅವರು ಐಎಂಎ ವಿರುದ್ಧ ಧರಣಿ ನಡೆಸುತ್ತಿದ್ದಾಗ ಅನೇಕ ಮಂದಿ ಅಲ್ಲಸಂಖ್ಯಾಕ ಸಮುದಾಯದ ಮಹಿಳೆಯರು ಬಂದು “ಕಾಂಗ್ರೆಸ್‌, ಜೆಡಿಎಸ್‌ನಿಂದ ವಂಚನೆ ಆಗಿದೆ. ಬಿಜೆಪಿ ನಮಗೆ ಅನ್ಯಾಯ ಮಾಡಿಲ್ಲ. ಹಣವನ್ನು ವಾಪಸ್‌ ತೆಗೆಸಿಕೊಡಬೇಕು’ ಎಂಬುದಾಗಿ ಮನವಿ ಮಾಡಿದ್ದಾರೆ. ಪಕ್ಷದ ಹೋರಾಟ ಮುಂದುವರಿಯಲಿದೆ. ಜಿಂದಾಲ್‌ ಕಂಪೆನಿ ಜತೆಗೆ ರಾಜ್ಯ ಸರಕಾರ ಶಾಮೀಲಾಗಿದೆ ಎಂದು ಶ್ರೀನಿವಾಸ ಪೂಜಾರಿ ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next