Advertisement

ಕೆಂಪಯ್ಯ, ಎಂ.ಎನ್‌.ರೆಡ್ಡಿ ವಿರುದ್ಧ ಸಿಎಂ ಗರಂ

02:20 AM Jul 17, 2017 | Team Udayavani |

ಬೆಂಗಳೂರು: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಕೊಲೆಯ ನಂತರ ಮಂಗಳೂರಿನಲ್ಲಿ ಉಂಟಾದ ಕೋಮು ಸಂಘರ್ಷ ಸಂಬಂಧ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ವಿಫ‌ಲರಾದ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಹಾಗೂ ಗುಪ್ತಚರ ವಿಭಾಗದ ಡಿಜಿ ಎಂ.ಎನ್‌.ರೆಡ್ಡಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಭಾನುವಾರ ಮೈಸೂರು ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿರುವ ಮುಖ್ಯಮಂತ್ರಿ
ಸಿದ್ದರಾಮಯ್ಯ, ತಮ್ಮ ಅಧಿಕೃತ ನಿವಾಸ ಕಾವೇರಿಗೆ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಹಾಗೂ ಗುಪ್ತಚರ ವಿಭಾಗದ ಪೊಲೀಸ್‌ ಮಹಾನಿರ್ದೇಶಕ ಎಂ.ಎನ್‌. ರೆಡ್ಡಿಯವರನ್ನು ಕರೆಸಿ, ಈ ಎರಡು ವಿಚಾರವಾಗಿ ಸ್ಪಷ್ಟನೆ ಕೇಳಿದ್ದಲ್ಲದೇ, ನಡೆದಿರುವ ಘಟನೆಯನ್ನು ಸಮರ್ಥವಾಗಿ ನಿಯಂತ್ರಿಸಲು ಆಗದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ಇಂಥ ಸಂದರ್ಭದಲ್ಲಿ ಕೋಮು ಸಂಘರ್ಷ ನಡೆದರೆ, ಸರ್ಕಾರದ ಮೇಲೆ ಕೆಟ್ಟ ಹೆಸರು ಬರುತ್ತದೆ. ಅದಲ್ಲದೇ ಸಾರ್ವಜನಿಕವಾಗಿ ಒಳ್ಳೆಯ ಅಭಿಪ್ರಾಯ ಹುಟ್ಟುವುದಿಲ್ಲ. ಬಿ.ಸಿ.ರೋಡ್‌ನ‌ಲ್ಲಿ ನಡೆದ ಘಟನೆ ಮತ್ತು ಅದರ ನಂತರ ಮಂಗಳೂರು ವ್ಯಾಪ್ತಿಯಲ್ಲಿ ಆದಂತಹ ಕೋಮು ಸಂಘರ್ಷದ ಬಗ್ಗೆ ಮುಂಚಿತವಾಗಿಯೇ ಗುಪ್ತಚಾರ ಇಲಾಖೆಗೆ ಮಾಹಿತಿ ಸಿಕ್ಕಿಲ್ಲವೇ? ಹಾಗಾದರೆ ರಾಜ್ಯದಲ್ಲಿ ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಎಂದು
ಎಂ.ಎನ್‌.ರೆಡ್ಡಿಯವರನ್ನು ಖಾರವಾಗಿಯೇ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಇನ್ನುಮುಂದೆ ಇಂಥ ಘಟನೆ ಮರುಕಳಿಸಬಾರದು. ಹದ್ದುಮೀರಿ ವರ್ತಿಸುವ ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಅಂಥ ಅಧಿಕಾರಿಗಳ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು
ಎಂಬುದನ್ನು ನಿರ್ಧರಿಸಿ, ಸರ್ಕಾರಕ್ಕೆ ತಿಳಿಸಿ ಎಂದು ಖಡಕ್‌ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹಾಗೆಯೇ ಬೆಂಗಳೂರು ಕಾರಾಗೃಹದ ವಿಚಾರವಾಗಿ ಡಿಜಿಪಿ ಸತ್ಯನಾರಾಯಣ ರಾವ್‌ ಹಾಗೂ ಡಿಐಜಿ ರೂಪಾ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಕೆಂಡಾಮಂಡಲರಾಗಿದ್ದ ಸಿಎಂ, ಗೃಹ ಸಚಿವರ ಸಲಹೆಗಾರರು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಇಲಾಖೆ ಅಧಿಕಾರಿಗಳ ವರ್ಗಾವಣೆಯಲ್ಲಿ ಆಸಕ್ತಿ ತೋರುವುದು ಮಾತ್ರವಲ್ಲ ಒಳ್ಳೆಯ ಕೆಲಸ ಮಾಡಿ ಎಂದು ಕಟುವಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಇಬ್ಬರು ಹಿರಿಯ ಅಧಿಕಾರಿಗಳು ಇಂಥ ತಪ್ಪುಗಳು ಆಗದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next