Advertisement

CM ಗರಂ ಸಚಿವರು ನರಂ: ಸಂಪುಟ ಸಭೆಯಲ್ಲಿ ಸಿದ್ದು ಸಿಟ್ಟು

01:09 AM Oct 11, 2024 | Team Udayavani |

ಬೆಂಗಳೂರು: ದಲಿತ ಸಿಎಂ ಚರ್ಚೆ, ಮುಖ್ಯಮಂತ್ರಿ ಬದಲಾವಣೆ ಮಾತು ಮತ್ತು ಸಚಿವರ ಡಿನ್ನರ್‌ ಪಾರ್ಟಿಗಳ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಸಿಎಂ ಬದಲಾವಣೆ ವಿಚಾರದ ಚರ್ಚೆಗೆ ವಿಪಕ್ಷಗಳಿಗಿಂತ ನಾವೇ ಹೆಚ್ಚು ಅವಕಾಶ ಕಲ್ಪಿಸುತ್ತಿದ್ದೇವೆ. ನವೆಂಬರ್‌ಗೆ ಸಿಎಂ ಇಳಿಯುತ್ತಾರೆ, ಡಿಸೆಂಬರ್‌ನಲ್ಲಿ ಇಳಿಸುತ್ತಾರೆ ಎಂದು ನಮ್ಮಲ್ಲೇ ಚರ್ಚೆ ಆಗುತ್ತಿದೆ. ಯಾವ್ಯಾವ ಶಾಸಕರು ಏನು ಮಾತನಾಡಿದ್ದಾರೆ ಎಂಬೆಲ್ಲ ಮಾಹಿತಿ ಇದೆ. ಇದೆಲ್ಲ ಬಿಟ್ಟು ಜನರ ಕೆಲಸ ಮಾಡುವ ಕಡೆಗೆ ಗಮನಹರಿಸುವಂತೆ ಸಿಎಂ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾವೆಲ್ಲ ನಿಮ್ಮ ಪರವಾಗಿಯೇ ಇದ್ದೇವೆ. ನಮ್ಮಿಂದ ಗೊಂದಲ ಸೃಷ್ಟಿ ಆಗುವುದಿಲ್ಲ. ಅದಕ್ಕೆ ಅವ ಕಾಶ ವನ್ನೂ ಕೊಡುವುದಿಲ್ಲ ಎಂಬುದಾಗಿ ಭರವಸೆ ನೀಡಿದರು ಎನ್ನಲಾಗಿದೆ.

ಕೋವಿಡ್‌ ಅವಧಿಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನ್ಯಾ| ಡಿ. ಮೈಕಲ್‌ ಕುನ್ಹಾ ನೀಡಿರುವ ಮಧ್ಯಾಂತರ ವರದಿ ಸಹಿತ ವಿವಿಧ ವಿಷಯಗಳ ಕುರಿತ ನಿರ್ಣಯ ಕೈಗೊಳ್ಳಲು ಕರೆದಿದ್ದ ಸಚಿವ ಸಂಪುಟ ಸಭೆಯು ಮುಖ್ಯಮಂತ್ರಿ ಪರ ಮತ್ತೂಮ್ಮೆ ಒಗ್ಗಟ್ಟು ಪ್ರದರ್ಶನಕ್ಕೂ ವೇದಿಕೆಯಾಯಿತು.

ಆ ಮೂಲಕ ಸಿಎಂ ಬದಲಾವಣೆ ಚರ್ಚೆಗೆ ಗೊಂದಲ ಎಳೆಯುವ ಪ್ರಯತ್ನ ನಡೆಯಿತು.ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ಹೆಸರು ತಳಕು ಹಾಕಿಕೊಂಡ ಬೆನ್ನಲ್ಲೇ ಸಿಎಂ ಬದಲಾವಣೆ ಕೂಗು ವಿಪಕ್ಷಕ್ಕಿಂತ ಹೆಚ್ಚು ಆಡಳಿತಾರೂಢ ಕಾಂಗ್ರೆಸ್‌ನಲ್ಲೇ ಪ್ರತಿಧ್ವನಿ ಸುತ್ತಿದೆ. ದಲಿತ ಸಚಿವರ ರಹಸ್ಯ ಸಭೆಗಳು ಕೂಡ ಒಂದರ ಹಿಂದೊಂದು ನಡೆಯುತ್ತಿವೆ. ಇದು ಗೊಂದಲಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರವಷ್ಟೇ ಇಂತಹ ರಹಸ್ಯ ಸಭೆಗಳಿಗೆ ತಡೆ ಹಾಕುವಂತೆ ಪಕ್ಷದ ವರಿಷ್ಠರಿಂದ ಕೆಪಿಸಿಸಿ ಅಧ್ಯಕ್ಷರಿಗೆ ಸೂಚನೆ ಬಂದಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಎಲ್ಲ ಸಚಿವರು ಸಂಪುಟ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.

Advertisement

ಯಾವುದೇ ಗೊಂದಲ ಇಲ್ಲ
ಸಚಿವರೆಲ್ಲರೂ ಸಿದ್ದರಾಮಯ್ಯ ಬೆನ್ನಿಗಿದ್ದಾರೆ. ಈ ಸಂಬಂಧ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಲಾಯಿತು. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಮುಖ್ಯಮಂತ್ರಿಗಳಿಗೂ ಇದನ್ನು ಮನದಟ್ಟು ಮಾಡಿಕೊಡಲಾಯಿತು ಎಂದು ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಸಚಿವ ಎಚ್‌.ಕೆ. ಪಾಟೀಲ್‌ ಸ್ಪಷ್ಟಪಡಿಸಿದರು.

ಪ್ರತ್ಯೇಕ ಸಭೆಗಳನ್ನು ಮಾಡುವಂತಿಲ್ಲ ಎಂಬುದಾಗಿ ಸಚಿವರಿಗೆ ತಾಕೀತು ಮಾಡಲಾಗಿ ದೆಯೇ ಎಂದು ಕೇಳಿದಾಗ, ಆ ರೀತಿಯ ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದರು.

ಈಗ ಒಗ್ಗಟ್ಟು ಪ್ರದರ್ಶನಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ, ಇತ್ತೀಚೆಗಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವರು ಸಿಎಂ ಜತೆಗಿರುವುದಾಗಿ ಹೇಳಿದ್ದಾರೆ. ಒಂದಿಬ್ಬರು ಸಚಿವರು ಸಭೆ ಅಥವಾ ಊಟ ಮಾಡಿದ ತತ್‌ಕ್ಷಣ ಅದು ಗೊಂದಲಕ್ಕೆ ಕಾರಣವಾಗುತ್ತಿದೆ. ಅದನ್ನು ನಿವಾರಿಸಲಾಯಿತು ಎಂದು ಸಮಜಾಯಿಷಿ ನೀಡಿದರು.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾವು ಎಲ್ಲಿಯೂ ಚರ್ಚೆ ನಡೆಸಿಲ್ಲ, ಅನಗತ್ಯವಾಗಿ ಸಭೆ ನಡೆಸಿಲ್ಲ. ಇನ್ನು ಮುಂದೆ ಯಾವುದೇ ಚರ್ಚೆ ಮಾಡುವುದಿಲ್ಲ. ನಾವು ಜವಾಬ್ದಾರಿಯುತ ಸಚಿವರಾಗಿರುವ ಜತೆಗೆ ಪಕ್ಷದಲ್ಲಿ ಹಿರಿಯ ರಾಜಕಾರಣಿ ಯಾಗಿದ್ದು, ನನಗೂ ಕೆಲವು ಜವಾಬ್ದಾರಿಗಳಿವೆ. ಸಚಿವರಾದ ಸತೀಶ್‌ ಜಾರಕಿಹೊಳಿ ಹಾಗೂ ಮಹದೇವಪ್ಪ ಅವರ ಜತೆ ತಾವು ಊಟ ಮಾಡಿ ಸಭೆ ನಡೆಸಿದ್ದಕ್ಕೆ ಚರ್ಚೆಗಳಾಗುತ್ತಿರುವುದು ವಿಷಾದಕರ.
-ಡಾ| ಪರಮೇಶ್ವರ್‌, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next