ಬೆಂಗಳೂರು: ಸಾರ್ವಜನಿಕವಾಗಿ ಮುಖ್ಯಮಂತ್ರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪಕ್ಷ ಬಿಡುವ ಮುನ್ಸೂಚನೆ ನೀಡಿದ್ದ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಮುನಿಸು ಶಮನಗೊಂಡಿದ್ದು, ಕಾಂಗ್ರೆಸ್ಸಿನಲ್ಲೇ ಉಳಿದು ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ ಎದುರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಕಡೆ ಮುಖ ಮಾಡಿದ್ದ ತಮ್ಮ ಆಪ್ತರಲ್ಲೊಬ್ಬರಾದ ಇಬ್ರಾಹಿಂ ಅವರ ಮನವೊಲಿಸುವ ಕಸರತ್ತಿನ ಭಾಗವಾಗಿ ಸೋಮವಾರ ಅವರ ನಿವಾಸಕ್ಕೇ ತೆರಳಿ ಭೋಜನ ಸೇವಿಸಿದ ಸಿದ್ದರಾಮಯ್ಯ, ಪಕ್ಷದಲ್ಲೇ ಉಳಿದುಕೊಳ್ಳುವ ಭರವಸೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಇಬ್ರಾಹಿಂ ಅವರನ್ನು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷರನ್ನಾಗಿ ನೇಮಿಸಿ 18 ತಿಂಗಳು ಕಳೆದಿದೆ.
ಈ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ಇಳಿಸಿ ವಿ.ಆರ್.ಸುದರ್ಶನ್ ಅವರಿಗೆ ಹುದ್ದೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ದೇಶಿಸಿದ್ದರು. ಇದರಿಂದಾಗಿ ಸಿದ್ದರಾಮಯ್ಯ ಅವರ ವಿರುದ್ಧ ಮುನಿಸಿಕೊಂಡಿದ್ದ ಇಬ್ರಾಹಿಂ ಪರೋಕ್ಷವಾಗಿ ಕಾಂಗ್ರೆಸ್ ತೊರೆಯುವ ಮಾತುಗಳನ್ನಾಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ರಾಹಿಂ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ ಸಿದ್ದರಾಮಯ್ಯ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಮನವೊಲಿಸಿದ್ದಾರೆ.
ಪಕ್ಷ ಅವರನ್ನು ಕಡೆಗಣಿಸಿಲ್ಲ- ಸಿಎಂ: ಇಬ್ರಾಹಿಂ ಭೇಟಿ ಬಳಿಕ ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇಬ್ರಾಹಿಂ ಕಾಂಗ್ರೆಸ್ ಬಿಡುತ್ತಾರೆ ಅಂತ ಹೇಳಿದ್ದು ಯಾರು? ಅವರು ಕಾಂಗ್ರೆಸ್‌ನಲ್ಲೇ ಇರುತ್ತಾರೆ.ಅವರನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂಬುದೆಲ್ಲಾ ಸುಳ್ಳು. ಇಬ್ರಾಹಿಂಬಹಳ ಹಿಂದಿನಿಂದಲೂ ಒಳ್ಳೆಯ ಸ್ನೇಹಿತ. ಅವರ ಮಕ್ಕಳು ದುಬೈನಿಂದ ಆಗಮಿಸಿದ್ದರಿಂದ ಊಟಕ್ಕೆ ಆಹ್ವಾನಿಸಿದ್ದರು, ಬಂದಿದ್ದೆ ಅಷ್ಟೇ ಎಂದರು. ಇಬ್ರಾಹಿಂ ಮಾತನಾಡಿ, ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಪ್ರಶ್ನಾತೀತ ನಾಯಕ. ಮುಂದಿನ ವಿಧಾನಸಭಾ ಚುನಾವಣೆಗೆ ನಾವೆಲ್ಲಾ ಸಿದ್ದರಾಮಯ್ಯ ನೇತೃತ್ವದಲ್ಲೇ ಹೋಗಲಿದ್ದೇವೆ.
ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಸಿದ್ದರಾಮಯ್ಯ ಅವರನ್ನು ನಂಬಿ ರಾಜ್ಯದ ಅಧಿಕಾರವನ್ನು ಅವರಿಗೆ
ನೀಡಿದ್ದಾರೆ. ನಾವೆಲ್ಲಾ ಅವರಿಗೆ ಬಲ ತುಂಬಲಿದ್ದೇವೆ ಎಂದು ಹೇಳಿದರು.
ಎಚ್.ಡಿ. ದೇವೇಗೌಡರು ನಮ್ಮ ಅಪ್ಪಾಜಿ ಇದ್ದ ಹಾಗೆ. ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದು ಜೆಡಿಎಸ್ ಹಾಗೂ ನಮ್ಮ ಎರಡೂ ಪಕ್ಷಗಳ ಉದ್ದೇಶ.
ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದಾಗ ಹೇಗೆ ಇದ್ದರೋ ಅದೇ ರೀತಿ ಇರಬೇಕೆಂದು ಹೇಳಿದ್ದು ನಿಜ. ಆದರೆ ಕಾಂಗ್ರೆಸ್ ತೊರೆಯುವ ಉದ್ದೇಶ ತಮಗಿಲ್ಲ ಎಂದು ಇಬ್ರಾಹಿಂ ಸ್ಪಷ್ಟಪಡಿಸಿದರು. ಈ ವೇಳೆ ದೇವೇಗೌಡರಿಂದ ಆಹ್ವಾನ ಬಂದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಹ್ವಾನ ಬಂದರೆ ಎಂಬ ಪ್ರಶ್ನೆಗಳಿಗೆ ಉತ್ತರ ಬೇಡ ಎಂದಷ್ಟೇ ಹೇಳಿದರು.