Advertisement
ಒಂದೆಡೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಶಾಸಕರ ಸಿಡುಕು, ಇನ್ನೊಂದೆಡೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸದ್ದು ಮಾಡಿದ ಪತ್ರ ಸಮರದ ಜತೆಗೆ ಸರಕಾರದ ವರ್ಚಸ್ಸು ಕಾಪಾಡುವಂತೆ ದಿಲ್ಲಿಯಲ್ಲಿ ವರಿಷ್ಠರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಸಮನ್ವಯ ಸಾಧನೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ ಸೇರಿ ಅಭಿಪ್ರಾಯ ಸಂಗ್ರಹ ಪ್ರಾರಂಭಿಸಿದ್ದಾರೆ. ಈ ಪ್ರಯತ್ನದ ಮೊದಲ ಭಾಗವಾಗಿ ತುಮಕೂರು, ಯಾದಗಿರಿ, ಚಿತ್ರದುರ್ಗ, ಬಾಗಲಕೋಟೆ, ಬಳ್ಳಾರಿ, ಧಾರವಾಡ ಜಿಲ್ಲೆಯ ಶಾಸಕ ರೊಂದಿಗೆ ಚರ್ಚೆ ನಡೆಸಲಾಗಿದೆ. ಈ ವಾರ ಪೂರ್ತಿ ಸಭೆ ನಡೆಯಲಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
Related Articles
ಎಲ್ಲ ಜಿಲ್ಲೆಯ ಶಾಸಕರು ಸಭೆಯಲ್ಲಿ ಕ್ಷೇತ್ರಾಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮಾಡಿದ ಮನವಿಗೆ ಸಿಎಂ ಸಿದ್ದರಾಮಯ್ಯ “ಕಾಯುವಿಕೆ’ಯ ಪಾಠ ಮಾಡಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಗೆ ಬದ್ಧವಾಗಿದೆ. 5 ಗ್ಯಾರಂಟಿಗಳ ಅನುಷ್ಠಾನ ಸಮರ್ಪಕವಾಗಿ ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ವರಿಷ್ಠರು ಹಾಗೂ ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಾಯಕರು ಕಾಯುತ್ತಿದ್ದಾರೆ. ಹೀಗಾಗಿ ಈ ಐದು ಯೋಜನೆಗಳಿಗೆ ಆದ್ಯತೆ ನೀಡಲೇಬೇಕಿದೆ. ಇದರ ಅರ್ಥ ನಿಮ್ಮ ಕೆಲಸಗಳಿಗೆ ತೊಂದರೆಯಾಗುತ್ತದೆ ಎಂದಲ್ಲ. ಆದರೆ ಸದ್ಯಕ್ಕೆ ವಿಶೇಷ ಅನುದಾನ ನೀಡಲು ಸಾಧ್ಯವಿಲ್ಲ. ಮುಂದಿನ ಬಜೆಟ್‌ವರೆಗೆ ಅಂದರೆ ಇನ್ನು 8 ತಿಂಗಳು ಕಾಯಬೇಕಾಗುತ್ತದೆ. ಗ್ಯಾರಂಟಿಯ ಜತೆಗೆ ಅಭಿವೃದ್ಧಿ ಕಾರ್ಯಗಳು ಹಿಂದೆ ಬೀಳುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂಬ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.
Advertisement
ಕ್ಷೇತ್ರವಾರು ತನಿಖೆ ನಡೆಸಿಹಿಂದಿನ ಸರಕಾರದ ಅವಧಿಯಲ್ಲಿ ನಡೆದ ಹಗರಣದ ಬಗ್ಗೆ ಕ್ಷೇತ್ರವಾರು ತನಿಖೆ ನಡೆಸುವಂತೆ ಕೆಲವು ಶಾಸಕರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು. ಚುನಾವಣೆಗೆ ಮುನ್ನ ನಾವು ಬಿಜೆಪಿ ಶಾಸಕರ ಅಕ್ರಮದ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಕಾರ್ಯಕರ್ತರ ಮುಂದೆ ಭರವಸೆ ನೀಡಿದ್ದೇವೆ. ಈಗ ಆ ಪ್ರಕಾರ ನಡೆದುಕೊಳ್ಳಬೇಕಿದೆ. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ತನಿಖೆ ನಡೆಸಿ ಎಂದು ಒತ್ತಾಯಿಸಿದ್ದಾರೆ. ಬಾಗಿನಕ್ಕೆ ಆಹ್ವಾನ
ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸುವಂತೆ ಬಾಗಲ ಕೋಟೆ ಜಿಲ್ಲೆಯ ಶಾಸಕರು ಹಾಗೂ ಉಸ್ತುವಾರಿ ಸಚಿವರು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ಗೆ ಮನವಿ ಮಾಡಿದರು. ಆ. 20ರ ಬಳಿಕ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸುವುದು ಬಹುತೇಕ ಅಂತಿಮಗೊಂಡಿದೆ. ಶಾಸಕರ ಆಗ್ರಹ ಏನು?
-ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ಬೇಕು
-ವರ್ಗಾವಣೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಅಭಿಪ್ರಾಯಕ್ಕೆ ಬೆಲೆ ನೀಡಲಿ
-ಹಿಂದಿನ ಸರಕಾರದ ಅವಧಿಯ ಹಗರಣಗಳ ತನಿಖೆಯಾಗಲಿ
-ಸಚಿವರು ಜಿಲ್ಲೆಗೆ ಬಂದು ಸಭೆ ನಡೆಸಲಿ
-ಅಧಿಕಾರಿಗಳು ಶಾಸಕರ ಮಾತಿಗೆ ಗೌರವ ನೀಡಲಿ ಸಿಎಂ ಭರವಸೆ ಏನು?
-8 ತಿಂಗಳುಗಳ ಬಳಿಕ ವಿಶೇಷ ಅನುದಾನಕ್ಕೆ ಕ್ರಮ
-ಸಚಿವರು ಜಿಲ್ಲೆಯಲ್ಲಿ ಸಭೆ ನಡೆಸಲಿದ್ದಾರೆ
-ವರ್ಗಾವಣೆ ವಿಚಾರದಲ್ಲಿ ಶಾಸಕರ ಮಾತಿಗೆ ಬೆಲೆ
-ಗ್ಯಾರಂಟಿ ಯೋಜನೆಯನ್ನು ಜನರಿಗೆ ತಲುಪಿಸಿ
-ಅರ್ಹ ಫಲಾನುಭವಿಗಳು ಯೋಜನೆ ವ್ಯಾಪ್ತಿಯಿಂದ ಬಿಟ್ಟು ಹೋಗದಂತೆ ನೋಡಿಕೊಳ್ಳಿ
-ಲೋಕಸಭಾ ಚುನಾವಣೆಗೆ ತಯಾರಿ ನಡೆಸಿ ಒಂದು ವಾರ ಶಾಸಕರ ಜತೆಗೆ ಈ ಸಭೆ ಮುಂದುವರಿಯುತ್ತದೆ. ಶಾಸಕರ ಅಹವಾಲುಗಳನ್ನು ಆಲಿಸಿದ್ದೇವೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಕೊಟ್ಟ ಭರವಸೆ ಪ್ರಕಾರ ಜಿಲ್ಲಾವಾರು ಶಾಸಕರ ಅಭಿಪ್ರಾಯ ಕೇಳುತ್ತಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ನಾವು ರಾಜಕಾರಣ ನಡೆಸುವುದಿಲ್ಲ. ಬಿಜೆಪಿ ಶಾಸಕರ ಜತೆಯೂ ಸಭೆ ನಡೆಸುತ್ತೇವೆ.
-ಡಿ.ಕೆ. ಶಿವಕುಮಾರ್, ಡಿಸಿಎಂ ಇಂದಿನ ಸಭೆಯಲ್ಲಿ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಶಾಸಕರು ತಮ್ಮ ಅಹವಾಲುಗಳನ್ನು ಹೇಳಿಕೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ.
-ಕೆ.ಎನ್. ರಾಜಣ್ಣ,
ಸಹಕಾರ ಸಚಿವ