Advertisement
ಈ ಪ್ರಶ್ನೆ ಮೂಲಕ ಬಿಬಿಎಂಪಿಯು ಇಂದಿರಾ ಕ್ಯಾಂಟೀನ್ ಮೂಲಕ ನೀಡುತ್ತಿರುವ ಆಹಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವರು ಬೇರಾರೂ ಅಲ್ಲ, ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ ನಡೆದ ಸಚಿವರು, ಉನ್ನತ ಅಧಿಕಾರಿಗಳ ಸಭೆಯಲ್ಲಿ ಯಡಿಯೂರಪ್ಪ ಅವರು ಇಂದಿರಾ ಕ್ಯಾಂಟೀನ್‌ನಲ್ಲಿ ನೀಡುತ್ತಿರುವ ಆಹಾರ ಪ್ರಮಾಣ ಹಾಗೂ ಲೆಕ್ಕದ ವಿವರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Related Articles
Advertisement
ಬಡವರು ಬಂದರೆ ದಿನಸಿ ಕೊಡಿ: ಬಿಪಿಎಲ್ ಕಾರ್ಡ್‌ದಾರರಿಗೆ ಎರಡು ತಿಂಗಳ ಪಡಿತರವನ್ನು ಏಕಕಾಲಕ್ಕೆ ನೀಡಲಾಗುತ್ತಿದೆ. ವಲಸಿಗರು, ಬಡವರು, ಕೂಲಿ ಕಾರ್ಮಿಕರು ಬಂದರೆ ಪರಿಶೀಲಿಸಿ ಅರ್ಹರೆನಿಸಿದರೆ ಉಚಿತವಾಗಿ ಪಡಿತರ ಕೊಡಬೇಕು. ಅಗತ್ಯವಿದ್ದವರಿಗೆದಾಖಲೆ ಇಲ್ಲ ಎಂಬ ಕಾರಣಕ್ಕೆ ಪಡಿತರ ನಿರಾಕರಿಸ ಬಾರದು. ನ್ಯಾಯಬೆಲೆ ಅಂಗಡಿಗಳಿಗೆ ಶ್ರೀಮಂತರು, ಮಧ್ಯಮ ವರ್ಗದವರು ಬರುವುದಿಲ್ಲ. ಬಡವರು, ಅಗತ್ಯವಿದ್ದವರಷ್ಟೇ ಬರುತ್ತಾರೆ. ಹಾಗಾಗಿ ಅರ್ಹರಿಗೆ ಪಡಿತರ ಕೊಡಿ. ಆದರೆ ಆ ನೆಪದಲ್ಲಿ ದುರುಪಯೋಗ ಬೇಡ ಎಂದು ಯಡಿಯೂರಪ್ಪ ಸೂಚನೆ ನೀಡಿದರು ಎನ್ನಲಾಗಿದೆ.
ಸಚಿವರುಗಳೆಲ್ಲಾ ತಮ್ಮ ಖಾತೆ ಜವಾಬ್ದಾರಿ ಜತೆಗೆ ಇತರೆ ಕೆಲಸ ಕಾರ್ಯಗಳ ಕಡೆಗೆ ಗಮನ ಹರಿಸ ಬೇಕು. ಬೆಂಗಳೂರಿನಲ್ಲಿದ್ದುಕೊಂಡು ಸಭೆ ನಡೆಸುವ ಬದಲಿಗೆ ತಮ್ಮ ಕ್ಷೇತ್ರಗಳಲ್ಲಿದ್ದುಕೊಂಡು ಮೇಲ್ವಿಚಾರಣೆ ನಡೆಸಬೇಕು. ಕೊರೊನಾ ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜತೆಗೆ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸ್ಪಂದಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು ಎಂದು ಮೂಲಗಳು ಹೇಳಿವೆ.
ಕಾರ್ಪೂರೇಟರ್‌ಗಳಿಗೆ ಪೊಟ್ಟಣ ಕೊಡಬೇಡಿ : ಕೆಲವೆಡೆ ಪಾಲಿಕೆ ಸದಸ್ಯರು ಇಂದಿರಾ ಕ್ಯಾಂಟೀನ್‌ನ ಆಹಾರ ಪೊಟ್ಟಣಗಳನ್ನು ಪಡೆದು ವಿತರಿಸುತ್ತಿರುವ ಬಗ್ಗೆ ಸ್ವತಃ ಪ್ರಸ್ತಾಪಿಸಿದ ಯಡಿಯೂರಪ್ಪ, ಯಾವುದೇ ಕಾರ್ಪೊರೇಟರ್‌ಗಳು ಇಂದಿರಾ ಕ್ಯಾಂಟೀನ್ ಆಹಾರ ಪಡೆದು ನೀಡಲು ಅವಕಾಶ ಕೊಡಬಾರದು. ಅದು ಬಿಜೆಪಿ ಕಾರ್ಪೊರೇಟರ್‌ಗಳಿದ್ದರೂ ನೀಡಬೇಡಿ. ಯಾವುದೇ ಕಾರ್ಪೊರೇಟರ್ ಆಹಾರ ಪೊಟ್ಟಣ ಪಡೆದರೆ ಅದನ್ನು ತಮ್ಮ ಬೆಂಬಲಿಗರ ಕಡೆಯವರಿಗೆ ಆದ್ಯತೆ ಮೇರೆಗೆ ನೀಡುತ್ತಾರೆ. ಹಸಿದವರಿಗೆ ಅನ್ನ ನೀಡುವ ವಿಚಾರದಲ್ಲಿ ರಾಜಕೀಯ ಮಾಡಬಾರದು. ಇನ್ನು ಮುಂದೆ ಸ್ಥಳೀಯ ಎಂಜಿನಿಯರ್‌ಗಳೇ ಕ್ಯಾಂಟೀನ್ ಮೂಲಕ ಆಹಾರ ವಿತರಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಡಕ್ ಸೂಚನೆ ನೀಡಿದರು ಎಂದು ಮೂಲಗಳು ಹೇಳಿವೆ.
ಉಚಿತ ಊಟಕ್ಕೆ ಬ್ರೇಕ್; ದರ ನಿಗದಿ : ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ನೀಡುತ್ತಿರುವ ಉಪಾಹಾರ, ಊಟವನ್ನು ಶನಿವಾರದಿಂದ ಈ ಹಿಂದೆ ನೀಡುತ್ತಿದ್ದ ದರಕ್ಕೆ ನೀಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ತಿಳಿಸಿದ್ದಾರೆ. ಲಾಕ್‌ಡೌನ್ ಆದ ಮೇಲೆ ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರಿಗೆ, ಬೀದಿ ವ್ಯಾಪಾರಿಗಳಿಗೆ, ಕೂಲಿಕಾರರಿಗೆ ಉಚಿತವಾಗಿ ಉಪಾಹಾರ, ಊಟ ನೀಡಲಾಗುತ್ತಿತ್ತು. ಶನಿವಾರದಿಂದ ಬೆಂಗಳೂರು ನಗರ ಹಾಗೂ ಜಿಲ್ಲಾ ಮತ್ತು ತಾಲೂಕು ಕೇಂದ್ರ ಸೇರಿ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಗ್ಗೆ ಉಪಾಹಾರಕ್ಕೆ 5 ರೂ, ಮಧ್ಯಾಹ್ನ, ರಾತ್ರಿ ಊಟಕ್ಕೆ ಪ್ಲೇಟ್‌ಗೆ 10 ರೂ. ವಿಧಿಸಲು ನಿರ್ಧರಿಸಲಾಗಿದೆ. ಮಾ.24 ರಿಂದ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಆಹಾರ ವಿತರಣೆ ಮಾಡಲಾಗುತ್ತಿತ್ತು. ಆದರೆ, ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿರಾ ಕ್ಯಾಂಟೀನ್ ಆಹಾರ ವಿತರಣೆಯಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ನಗರಾಭಿವೃದ್ಧಿ ಇಲಾಖೆ ಈ ಆದೇಶ ಹೊರಡಿಸಿದೆ.