Advertisement

ಸಿಎಂ ದೆಹಲಿ ಭೇಟಿ ಸಂಪುಟಕ್ಕಾಗಿ ಅಲ್ಲ: ಸಂಸದರ ಭೇಟಿಗೆ ಮಾತ್ರ ಸೀಮಿತ

01:34 PM Feb 02, 2022 | Team Udayavani |

ಬೆಂಗಳೂರು : ಸಿಎಂ‌ ಬಸವರಾಜ್ ಬೊಮ್ಮಾಯಿ ದಿಲ್ಲಿ ಭೇಟಿಯಿಂದ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಹಸಿರು ನಿಶಾನೆ ಸಿಗಬಹುದೆಂಬ ಆಕಾಂಕ್ಷಿಗಳ ನಿರೀಕ್ಷೆ‌ ಮತ್ತೆ ಭಂಗವಾಗಿದೆ.ಹೌದು, ಸಿಎಂ ಬೊಮ್ಮಾಯಿ ಅವರ ಈ ಬಾರಿಯ ದಿಲ್ಲಿ ಭೇಟಿಯೂ ರಾಜಕೀಯವಾಗಿ ಯಾವುದೇ ಬೆಳವಣಿಗೆಗೆ ಇಂಬು ನೀಡುವುದಿಲ್ಲ. ರಾಜ್ಯದ ಸಂಸದರ ನಿಯೋಗದ ಜತೆ ಸಭೆ ನಡೆಸುವುದಕ್ಕೆ ಮಾತ್ರ ಸೀಮಿತವಾಗಲಿದೆ.

Advertisement

ದೆಹಲಿಯಲ್ಲಿ ಸಂಸತ್ ಸದಸ್ಯರ ಸಭೆ ಆಗಬೇಕು.ನಾನು ನಾಳೆ ದೆಹಲಿಗೆ ಹೋಗಲು ಯೋಚಿಸಿದ್ದೆ. ಆದರೆ ಸಂಸತ್ ಸದಸ್ಯರ ಮನವಿ ಮೇರೆಗೆ ಸೋಮವಾರ ದೆಹಲಿಗೆ ಹೋಗುತ್ತೇನೆ ಎಂದು ಬೊಮ್ಮಾಯಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಮೂಲಗಳ ಪ್ರಕಾರ ವರಿಷ್ಠರಿಂದ ಬೊಮ್ಮಾಯಿ ಅವರಿಗೆ ಇನ್ನೂ ಸಮಯಾವಕಾಶ ದೊರೆತಿಲ್ಲ.‌ಹೀಗಾಗಿ ದೆಲ್ಲಿಗೆ ತೆರಳಿ ಬರಿಗೈಯಲ್ಲಿ ವಾಪಾಸ್ ಬಂದಿದ್ದಾರೆಂಬ ಟೀಕೆ ಎದುರಾಗಬಹುದೆಂಬ ಕಾರಣಕ್ಕೆ ಸಂಸದರ ಭೇಟಿಗೆ ಸೋಮವಾರ ದಿನಾಂಕ ನಿಗದಿ ಮಾಡಿಕೊಂಡಿದ್ದಾರೆ. ಆ ಬಳಿಕ ವರಿಷ್ಠರ ಭೇಟಿಗೆ ಪ್ರಯತ್ನ ನಡೆಯಲಿದೆ ಎಂದು ತಿಳಿದು ಬಂದಿದೆ. ಪಂಚರಾಜ್ಯ ಚುನಾವಣೆ ಹಾಗೂ ಸಂಸತ್ ಕಲಾಪದಲ್ಲಿ ಕೇಂದ್ರ ನಾಯಕರು ಬ್ಯುಸಿ ಇರುವುದರಿಂದ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಅವಕಾಶ ಕಡಿಮೆ ಇದೆ.

ಕಡ್ಡಾಯವಾಗಿ ಹಾಜರಿಗೆ ಸೂಚನೆ

ಬಜೆಟ್ ಪೂರ್ವಭಾವಿ ಸಭೆಗಳ ಹಿನ್ನಲೆಯಲ್ಲಿ ಸಂಬಂಧಪಟ್ಟ ಸಚಿವರು ಸಿಎಂ ಸಭೆ ಕರೆದ ವೇಳೆ ಹಾಜರು ಇರುವಂತೆ ಸೂಚನೆ ನೀಡಲಾಗಿದೆ. ಸಿಎಂ ಕಚೇರಿಯಿಂದ ಎಲ್ಲಾ ಸಚಿವರಿಗೆ ಸೂಚನೆ ಹೊರಡಿಸಲಾಗಿದ್ದು, ಫೆಬ್ರವರಿ 7 ರಿಂದ 14 ರವರಗೆ ನಿರಂತರ ಬಜೆಟ್ ಪೂರ್ವಭಾವಿ ಸಭೆ ನಡೆಸಲಾಗುತ್ತಿದ್ದು, ಈ ವೇಳೆ ಕಡ್ಡಾಯವಾಗಿ ಹಾಜರಿರಲು ಸೂಚನೆ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next