Advertisement

ಇಂದು ಸಿಎಂ, ಡಿಸಿಎಂ ಹೈಕಮಾಂಡ್‌ ಭೇಟಿ

11:12 PM May 27, 2024 | Team Udayavani |

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ 7 ಸ್ಥಾನ ಗೆಲ್ಲುವ ಅವಕಾಶವುಳ್ಳ ಆಡಳಿತಾ ರೂಢ ಕಾಂಗ್ರೆಸ್‌, ಅಭ್ಯರ್ಥಿಗಳನ್ನು ಅಂತಿಮಗೊಳಿಸಿಕೊಳ್ಳಲು ಹೈಕಮಾಂಡ್‌ ಮುಂದೆ ಪರೇಡ್‌ ನಡೆಸಲಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ದಿಲ್ಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌, ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲಿದ್ದಾರೆ.

Advertisement

ಈಗಾಗಲೇ ಕಾಂಗ್ರೆಸ್‌ ನಾಯಕರೇ ಹೇಳಿಕೊಂಡಂತೆ 7 ಸ್ಥಾನಗಳಿಗೆ 70 ಆಕಾಂಕ್ಷಿಗಳಿದ್ದು, ಇಷ್ಟು ಜನರಲ್ಲಿ ಯಾರಿಗೆ ಟಿಕೆಟ್‌ ಕೊಡಬೇಕೆಂಬುದು ಕಾಂಗ್ರೆಸ್‌ಗೆ ತಲೆನೋವಾಗಿದೆ. ಇದರ ಬೆನ್ನಲ್ಲೇ ಈಗಾಗಲೇ ದಿಲ್ಲಿ ತಲುಪಿರುವ ಕೆಲವು ಆಕಾಂಕ್ಷಿಗಳು, ಟಿಕೆಟ್‌ ಪಡೆಯಲು ಕಸರತ್ತು ನಡೆಸಿದ್ದು, ಹಲವು ನಾಯಕರನ್ನು ಭೇಟಿ ಮಾಡಿ ಒತ್ತಡ ಕೂಡ ಹಾಕಿದ್ದಾರೆ.

ಕೆಪಿಸಿಸಿಯಿಂದ ಒಂದು ಪಟ್ಟಿ ಸಿದ್ಧವಾಗಿದ್ದು, ಇದೇ ಪಟ್ಟಿಯನ್ನು ಡಿಸಿಎಂ ಶಿವಕುಮಾರ್‌ ಅವರು ಮಂಗಳವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲ, ಕೆ.ವೇಣುಗೋಪಾಲ್‌ ಅವರ ಮುಂದಿಡಲಿದ್ದಾರೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಕೂಡ ಪ್ರತ್ಯೇಕ ಪಟ್ಟಿಯನ್ನು ಹೈಕಮಾಂಡ್‌ ಮುಂದಿಡುವ ಸಾಧ್ಯತೆಗಳಿದ್ದು, ಎರಡೂ ಪಟ್ಟಿಯಲ್ಲಿರುವ ಸಾಮಾನ್ಯ ಹೆಸರುಗಳು ಹಾಗೂ ಹೈಕಮಾಂಡ್‌ ಮಾಡಿಕೊಂಡಿರುವ ಪಟ್ಟಿಯನ್ನು ತುಲನೆ ಮಾಡಿ ಟಿಕೆಟ್‌ ಹಂಚಿಕೆ ಮಾಡುವ ಸಾಧ್ಯತೆಗಳು ದಟ್ಟವಾಗಿದೆ.

ಬುಧವಾರ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಅಂತಿಮ ಸಭೆ ನಡೆಯಲಿದ್ದು, ರಾಹುಲ್‌ ಗಾಂಧಿ ಸಹಿತ ಪಕ್ಷದ ಮುಖಂಡರು ಸಮಾಲೋಚಿಸಿ ಮೇ 31 ಅಥವಾ ಜೂ.1ರಂದು ಅಂತಿಮ ಪಟ್ಟಿ ಹೊರಬೀಳುವ ಸಾಧ್ಯತೆಗಳಿವೆ.

ಬಿಜೆಪಿಯಲ್ಲಿ 3 ಸ್ಥಾನಕ್ಕೆ 40 ಆಕಾಂಕ್ಷಿಗಳು!
ಇತ್ತ 3 ಸ್ಥಾನ ಗೆಲ್ಲುವ ಅವಕಾಶ ಇರುವ ಬಿಜೆಪಿಯು ಸೋಮವಾರ ಪಟ್ಟಿ ಬಿಡುಗಡೆ ಮಾಡಬಹುದೆಂದು ನಿರೀಕ್ಷೆ ಹುಸಿಯಾಗಿದ್ದು, ವರಿಷ್ಠರು ಕೈಗೆ ಸಿಗದೆ ಇರುವುದರಿಂದ ಅಭ್ಯರ್ಥಿಗಳನ್ನು ಆಖೈರುಗೊಳಿಸಲಾಗಿಲ್ಲ. ಅಲ್ಲದೆ ಇರುವ ಮೂರು ಸ್ಥಾನಗಳಿಗೆ 40ಕ್ಕೂ ಹೆಚ್ಚು ಆಕಾಂಕ್ಷಿಗಳಿರುವುದರಿಂದ ತಲೆಬಿಸಿ ಹೆಚ್ಚಾಗಿದೆ.

Advertisement

ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ?
ಅತ್ತ ಜೆಡಿಎಸ್‌ನ ಬಿ.ಎಂ. ಫಾರೂಕ್‌ ನಿವೃತ್ತಿಯಿಂದ ತೆರವಾಗುತ್ತಿರುವ ತಮ್ಮ ಸ್ಥಾನಕ್ಕೆ ಅವರೇ ಮರು ಆಯ್ಕೆ ಬಯಸುತ್ತಿದ್ದು, ಪಕ್ಷದ ನಾಯಕರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡಬೇಕೆಂಬ ಒತ್ತಡವೂ ಇದೆ. ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರಿಗೆ ಟಿಕೆಟ್‌ ಕೊಡುವ ಸಂಭವವಿದ್ದು, ಮಿತ್ರಪಕ್ಷದಿಂದ ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next