Advertisement

D.K. Shivakumar ಸಿಬಿಐ ತನಿಖೆಗೆ ಸಹಕಾರ ನೀಡಲು ಸಿದ್ಧ

11:30 PM Jun 07, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರದ ಅನುಮತಿ ಇಲ್ಲದಿದ್ದರೂ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಅಕ್ರಮ ನಡೆದರೆ ತನಿಖೆ ನಡೆಸಲು ಸಿಬಿಐಗೆ ಅವಕಾಶವಿದೆ. ಹಾಗಾಗಿ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ವಹಿಸುವ ಪ್ರಶ್ನೆಯಿಲ್ಲ. ಆದರೆ ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಅಕ್ರಮ ನಡೆದರೆ ಸರಕಾರದ ಅನುಮತಿ ಇಲ್ಲದಿದ್ದರೂ ಸಿಬಿಐಗೆ ತನಿಖೆ ನಡೆಸಲು ಅವಕಾಶ ಇದೆ. ಅದಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ನಾವು ಸಿದ್ಧ ಎಂದರು.

ರಾಹುಲ್‌ ಗಾಂಧಿ ಸಿಎಂ ರಾಜೀನಾಮೆ ಪಡೆಯಲು ಬಂದಿದ್ದಾರಾ ಎಂಬ ಬಿಜೆಪಿ ಹೇಳಿಕೆಗೆ, ಮೊದಲು ಅವರ ಪಕ್ಷದ ಬಗ್ಗೆ ಮಾತನಾಡಲಿ. ನಿಗಮ ಮಂಡಳಿಗಳಲ್ಲಿ ಹಣ ದುರುಪಯೋಗ ಪ್ರಕರಣ ಈ ಹಿಂದೆಯೂ ಆಗಿದೆ. ಈಗ ಆತ್ಮಹತ್ಯೆಯಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ. ಬಿಜೆಪಿ ಅವಧಿಯಲ್ಲಿನ ಪ್ರಕರಣಗಳು ಇವೆ. ಸರಕಾರ ಹಾಗೂ ಪಕ್ಷಕ್ಕೆ ಮುಜುಗರ ಆಗಬಾರದು ಅಂತ ಸಚಿವರು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ನಾನು ಹಾಗೂ ಮುಖ್ಯಮಂತ್ರಿಗಳು ಈ ಬಗ್ಗೆ ಸಚಿವರ ಜತೆ ಚರ್ಚಿಸಿದ್ದು, ಅವರು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಯಾವುದೇ ತನಿಖೆ ಬೇಕಾದರೂ ನಡೆಯಲಿ ಎಂದು ತಿಳಿಸಿರುವುದಾಗಿ ಹೇಳಿದರು.

ಮೈತ್ರಿ ಮೂಲಕ ಒಕ್ಕಲಿಗ ಹಾಗೂ ಲಿಂಗಾಯತ ಮತಗಳು ಒಗ್ಗೂಡಿವೆಯೇ ಎಂದು ಕೇಳಿದಾಗ, ಕಾಂಗ್ರೆಸ್‌ ವಿರೋಧಿ ಮತಗಳು ಒಂದಾಗಲಿವೆ ಎಂಬ ನಿರೀಕ್ಷೆ ಇತ್ತು. ಅದರಂತೆ ಆಗಿದೆ ಅಷ್ಟೇ ಎಂದು ಹೇಳಿದರು.

ಇವಿಎಂ ವಿಚಾರವಾಗಿ ನನಗೂ ಕೆಲವು ಅನುಮಾನಗಳಿವೆ. ಈಗ ನಾನು ಆ ಬಗ್ಗೆ ಮಾತನಾಡುವುದಿಲ್ಲ. ನಾನು ಕೆಲವು ಅಂಕಿ ಅಂಶ ಕಲೆಹಾಕುತ್ತಿದ್ದು, ದಾಖಲೆ ಸಿಕ್ಕ ಬಳಿಕ ನಾನು ಈ ವಿಚಾರವಾಗಿ ಚರ್ಚಿಸುತ್ತೇನೆ. – ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

 

Advertisement

Udayavani is now on Telegram. Click here to join our channel and stay updated with the latest news.

Next