Advertisement
ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹೊಸ ದಾಗಿ ಒಂದು ಸಾವಿರ ಮದ್ಯದಂಗಡಿ ತೆರೆಯಲು ಮುಂದಾಗಿದ್ದ ರಾಜ್ಯ ಸರಕಾರದ ನಿರ್ಧಾರಕ್ಕೆ ಮಹಿಳಾ ಸಂಘಟನೆಗಳ ಸಹಿತ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ. ಆದರೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿ ಟ್ಟಿದ್ದು, ಮುಂಬರುವ ದಿನಗಳಲ್ಲಿ ಎಲ್ಲರ ಜತೆ ಚರ್ಚಿಸಿ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳು ತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಈ ವಿಚಾರಕ್ಕೆ ಸಂಬಂಧಿಸಿ ಸರಕಾರದಲ್ಲಿ ಭಿನ್ನ ಧ್ವನಿ ಕೇಳಿಬಂದಂತಾಗಿದೆ.
Related Articles
Advertisement
ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಹೊಸ ಮದ್ಯದಂಗಡಿಗಳನ್ನು ತೆರೆಯದಿರುವ ಬಗ್ಗೆ ಸರಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಒಂದು ಸಾವಿರ ಮದ್ಯದಂಗಡಿ ತೆರೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅಬಕಾರಿ ಸಚಿವರು ಹೇಳಿಕೆ ನೀಡಿ ದ್ದಾರೆ, ಆದರೆ ನಾವು ತೆರೆಯುವುದಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಮದ್ಯದಂಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಸ್ಪಷ್ಟನೆಯನ್ನು ಅವರು ನೀಡಿಲ್ಲ. ಆದರೆ ಈ ಬಗ್ಗೆ ಸಾರ್ವಜನಿಕ ಚರ್ಚೆ ಹೆಚ್ಚದಂತೆ ಮಾಡುವ ಪ್ರಯತ್ನಕ್ಕೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಹೀಗಾಗಿ ಒಂದು ತಿಂಗಳು ಕಳೆಯುವುದರೊಳಗಾಗಿ ಸರಕಾರ ತನ್ನ ನಿಲುವಿನಿಂದ “ಯೂಟರ್ನ್’ ತೆಗೆದುಕೊಂಡಂತಾಗಿದೆ.
ಡಿಸಿಎಂ ವಾದವೇನು?
ಮಾಗಡಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, “ಇದು ಹಣಕಾಸು ಇಲಾಖೆಯ ನಿರ್ಧಾರ. ಕಳೆದ ಮೂವತ್ತು ವರ್ಷಗಳಿಂದ ಹೊಸ ಮದ್ಯದ ಅಂಗಡಿ ಪ್ರಾರಂಭಕ್ಕೆ ಅನುಮತಿ ನೀಡಿರಲಿಲ್ಲ. ಅನೇಕರು ಪರವಾನಿಗೆಯನ್ನು 4ರಿಂದ 5 ಕೋಟಿ ರೂ.ಗೆ ಮಾರುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಉದ್ಯೋಗ ಸೃಷ್ಟಿ ಮಾಡಬೇಕು. ಎಲ್ಲಿ ಮದ್ಯದ ಅಂಗಡಿ ತೆರೆಯಬೇಕೆಂಬುದನ್ನು ಚರ್ಚೆ ಮಾಡುತ್ತೇವೆ. ಹಾಗೆಂದು ಹಳ್ಳಿ ಹಳ್ಳಿಗಳಲ್ಲಿ ಮದ್ಯದಂಗಡಿ ತೆರೆಯಲು ಸಾಧ್ಯವಿಲ್ಲ. ಮದ್ಯಪಾನ ವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಹಿತ ಎಲ್ಲರ ಜತೆ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.