ಬೆಂಗಳೂರು: ದೇವನಹಳ್ಳಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಶಾಸಕರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿ ಅವರೊಂದಿಗೆ ಭೋಜನ ಸ್ವೀಕರಿಸಿ, ಸಮಾಲೋಚನೆ ನಡೆಸಿದರು.
ಇದಕ್ಕೂ ಮುನ್ನ ಪದ್ಮನಾಭನಗರ ನಿವಾಸದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಕೆಲಹೊತ್ತು ಸಮಾಲೋಚನೆ ನಡೆಸಿ, ಸರ್ಕಾರವನ್ನು ಉಳಿಸಿಕೊಳ್ಳಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು.
ರೆಸಾರ್ಟ್‌ನಲ್ಲಿ ಶಾಸಕರ ಜತೆಗಿನ ಭೇಟಿ ಸಂದರ್ಭದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಯಾರೂ ಆತಂಕ ಪಡಬೇಕಿಲ್ಲ. ಸರ್ಕಾರ ಉಳಿಯಲಿದೆ ಎಂದು ವಿಶ್ವಾಸ ತುಂಬಿದರು.
ಬಿಜೆಪಿಯ ಆಪರೇಷನ್ ಪ್ರಯತ್ನ ಈ ಬಾರಿಯೂ ವಿಫಲವಾಗಲಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆಲವು ಶಾಸಕರು ವಾಪಸ್ಸಾಗಲಿದ್ದಾರೆ. ಬಿಕ್ಕಟ್ಟು ಬಗೆಹರಿಯಲಿದೆ ಎಂದು ತಿಳಿಸಿದರು. ರೆಸಾರ್ಟ್‌ನಲ್ಲಿದ್ದ ಸಂದರ್ಭದಲ್ಲೇ ಶಾಸಕರ ರಾಜೀನಾಮೆ ಕುರಿತು ಸ್ಪೀಕರ್ ನೀಡಿದ ತೀರ್ಪಿನ ಕುರಿತು ಮಾಹಿತಿ ಪಡೆದರು.
ಅಲ್ಲಿಂದಲೇ ಕಾಂಗ್ರೆಸ್ ನಾಯಕರ ಜತೆಗೂ ಚರ್ಚಿಸಿದರು. ಜುಲೈ 12ರಂದು ನಡೆಯಲಿರುವ ವಿಧಾನಮಂಡಲದ ಅಧಿವೇಶನದವರೆಗೂ ರೆಸಾರ್ಟ್‌ನಲ್ಲಿಯೇ ಇದ್ದು, ಶುಕ್ರವಾರ ನೇರವಾಗಿ ಅಲ್ಲಿಗೆ ಬರುವಂತೆ ಶಾಸಕರಿಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ.