ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವಿವಾರ ಲಂಡನ್‌ನಲ್ಲಿರುವ ಕನ್ನಡಿಗರ ಜತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಧೈರ್ಯ ತುಂಬಿದರು.
ಲಾರ್ಡ್ ಚಾನ್ಸಲರ್ ಮತ್ತು ಸೆಕ್ರೆಟರಿ ಫಾರ್ ಜಸ್ಟೀಸ್, ಮೆಂಬರ್ ಆಫ್ ಪಾರ್ಲಿಮೆಂಟ್ ರಾಬರ್ಟ್ ಬಕ್ಲಂಡ್ ಮತ್ತು ಸುರೇಶ್ ಗತ್ತಾಪುರ ಶರವಣ ಗುರುಮೂರ್ತಿ ಸಹಿತ ಹಲವು ಯುಕೆ ಕನ್ನಡ ಬಳಗದ ಸದಸ್ಯರ ಜತೆ ಮಾತನಾಡಿದರು.
ಕೋವಿಡ್- 19 ವಿರುದ್ಧ ಜಾಗತಿಕ ಮಟ್ಟದಲ್ಲಿ ಹೋರಾಟ ನಡೆದಿದೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ಸರಕಾರವು ನಿಯಂತ್ರಣ ಕ್ರಮ ಕೈಗೊಂಡು ಲಾಕ್‌ಡೌನ್ ಪಾಲನೆ ಮಾಡಿದೆ ಎಂದವರು ತಿಳಿಸಿದರು.
ಲಂಡನ್‌ನಲ್ಲಿ ನೆಲೆಸಿರುವ ಕನ್ನಡಿಗರು, ವಿದ್ಯಾಭ್ಯಾಸಕ್ಕಾಗಿ ಹೋಗಿರುವ ವಿದ್ಯಾರ್ಥಿಗಳು ಆರೋಗ್ಯ ರಕ್ಷಣೆ ಬಗ್ಗೆ ಕಾಳಜಿ ವಹಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ವಿಮಾನಯಾನ ಪ್ರಾರಂಭವಾದ ಅನಂತರ ಸರಕಾರ ನಿಮಗೆ ಮಾಡಬಹುದಾದ ಸಹಾಯದ ಬಗ್ಗೆ ಕ್ರಮ ಕೈಗೊಳ್ಳಲಿದೆ. ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇಂಗ್ಲೆಂಡ್ ಕಾನೂನು ಸಚಿವ ರಾಬರ್ಟ್ ಬಕ್ಲಂಡ್, ಕೋವಿಡ್- 19 ಹರಡುತ್ತಿರುವ ಬಗ್ಗೆ ಮತ್ತು ಯಾವ ರೀತಿ ನಿಭಾಯಿಸಲಾಗುತ್ತಿದೆ ಎಂಬುದನ್ನು ವಿವರಿಸಿದರು. ಕರ್ನಾಟಕದಲ್ಲಿ ಕೊರೊನಾ ನಿಗ್ರಹ ಮಾಡುವಲ್ಲಿ ಸರಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶರವಣ ಗುರುಮೂರ್ತಿ ಮಾತನಾಡಿ ಲಂಡನ್‌ನಲ್ಲಿ ಓದುತ್ತಿರುವ ಹಲವು ಕನ್ನಡಿಗ ವಿದ್ಯಾರ್ಥಿಗಳು ಸಾಲ ತೆಗೆದುಕೊಂಡು ಬಂದಿದ್ದು ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಬ್ಯಾಂಕ್‌ನವರ ಜತೆ ಮಾತನಾಡುವುದಾಗಿ ಭರವಸೆ ನೀಡಿದರು.