ವಿಜಯಪುರ: ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಯಡಿಯೂರಪ್ಪ ಪಾತ್ರ ಮಹತ್ವದ್ದಾಗಿದೆ. ಆದರೆ ಅಧಿಕಾರಕ್ಕೆ ಬಂದ ನಂತರ ನೆಮ್ಮದಿ ಇಲ್ಲದಂತಹ ಸ್ಥಿತಿ ನಿರ್ಮಿಸಲಾಗುತ್ತಿದೆ. ಎರಡು ವರ್ಷ ಅಧಿಕಾರ ನಡೆಸಲು ಅವಕಾಶ ನೀಡಿ. ಒಂದೊಮ್ಮೆ ಸಿಎಂ ಸ್ಥಾನದಿಂದ ಪದಚ್ಯುತಿ ಮಾಡಿದಲ್ಲಿ ರಾಜ್ಯದಲ್ಲಿ ಬಿಜೆಪಿ ತಕ್ಕ ಶಿಕ್ಷೆ ಅನುಭವಿಸುತ್ತದೆ ಎಂದು ವಿಜಯಪುರ ಜಿಲ್ಲೆಯ ಮನಗೂಳಿ ಹಿರೇಮಠದ ಪಂಚಮಸಾಲಿ ಮಠಾಧೀಶ ಅಭಿನವ ಸಂಗನಬಸವ ಶ್ರೀಗಳು ಬಿಜೆಪಿ ಹೈಕಮಾಂಡ್ ಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಮಠಾಧೀಶರು ಮಾತ್ರವಲ್ಲ ದಕ್ಷಿಣ ಭಾರತದ ಮಠಾಧೀಶರ ಸಂಪೂರ್ಣ ಅಧಿಕಾರ ಮುಗಿಸಲು ಅವಕಾಶ ಸಿಗಬೇಕು ಎಂಬ ಆಗ್ರಹವಿದೆ ಎಂದರು
ಯಡಿಯೂರಪ್ಪ ಅವರಿಗೆ ಸಿಕ್ಕಿರುವ ಜೀವಿತಾವಧಿ ಕೊನೆಯ ಅವಕಾಶ. ಅವರ ಪರಿಶ್ರಮದಿಂದಲೇ ಲಿಂಗಾಯತರ ಸಂಪೂರ್ಣ ಬೆಂಬಲದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಯಾರೂ ಮರೆಯಬಾರದು. ಎರಡು ವರ್ಷ ಅವಧಿ ಮುಗಿಸಲು ಬಿಜೆಪಿ ಹೈಕಮಾಂಡ್ ಅವಕಾಶ ನೀಡುವಂತೆ ಲಿಂಗಾಯತ ಸಮುದಾಯದ ಪರವಾಗಿ ಹಾಗೂ ಮಠಾಧೀಶರ ಪರವಾಗಿ ಸೂಚನೆ ನೀಡುತ್ತೇವೆ ಎಂದರು.
ಇದನ್ನೂ ಓದಿ:ಕೇಂದ್ರ ಸರ್ಕಾರ ಹತೋಟಿ ಸಾಧಿಸುವ ಸಂಚು ಮಾಡಿದ್ರೆ..: ಪಂಡಿತಾರಾಧ್ಯ ಶ್ರೀ
ಕೋವಿಡ್, ಪ್ರವಾಹದಂಥ ಸಂಕಷ್ಟ ಹಾಗೂ ಆರ್ಥಿಕ ದುಸ್ಥಿತಿಯ ಸಂದರ್ಭದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಈ ಹಂತದಲ್ಲಿ ಜು.26 ಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿತ್ತಾರೆ ಎಂಬ ಸುದ್ದಿ ಹರಡಿದೆ. ಇಂಥ ಸ್ಥಿತಿ ನಿರ್ಮಾಣವಾದರೆ ಲಿಂಗಾಯತ ಮಠಾಧೀಶರು ಸಮಾವೇಶ ಮಾಡಿ ಪ್ರತಿಭಟಿಸಲು ಮುಂದಾಗಲಿದ್ದಾರೆ ಎಂದರು.
ಸಿಎಂ ಬದಲಿಸಿದರೆ ಮಠಾಧೀಶರ ಒಕ್ಕೂಟದಿಂದ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಸಿದ್ಧ ಎಂದರು.
ಲಿಂಗಾಯತರಲ್ಲಿ ರಾಜಕೀಯವಾಗಿ ಎರಡನೇ ಹಂತದ ನಾಯಕರಿದ್ದರೂ ಯಡಿಯೂರಪ್ಪ ಅವರಿಗೆ ಸಿಕ್ಕ ಅಧಿಕಾರದ ಅವಕಾಶ ಪೂರ್ಣಗೊಳ್ಳಲು ಅವಕಾಶ ನೀಡಬೇಕು ಎಂದರು.
ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರುಗಳು ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದರೆ ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ ಎಂದರು.
ಸಿ.ಡಿ. ವಿಷಯದಲ್ಲಿ ನಿರಾಣಿ ವಿರುದ್ಧ ಯಾರೋ ಮಾಡುವ ಆಧಾರ ರಹಿತ ಆರೋಪದಲ್ಲಿ ಸರಿಯಲ್ಲ. ಈ ಬಗ್ಗೆ ನಿರಾಣಿ ಅವರೇ ಉತ್ತರ ನೀಡುತ್ತಾರೆ ಎಂದರು.