Advertisement
ಹೌದು. ರಾಜ್ಯ ರಾಜಕೀಯ ರಾಡಿ ಎದ್ದು ಪಕ್ಷದಲ್ಲಿ ಪರಸ್ಪರ ಕೆಸರೆರಚಾಟ ನಡೆಯುತ್ತಿದ್ದರೂ ಶಿಸ್ತಿನ ಪಕ್ಷದ ಹೈಕಮಾಂಡ್ ಮಾತ್ರ ಸುಮ್ಮನೆ ಕುಳಿತಿದೆ. ನಾಯಕತ್ವ ಬದಲಾವಣೆ ಎಂಬ ಗೊಂಬೆಗೆ ಕೀಲು ಕೊಟ್ಟು ಆಡಿಸಲು ಬಿಟ್ಟು ಅದರಿಂದ ಬರುತ್ತಿರುವ ಭಿನ್ನ ಸ್ವರಗಳಿಗೆ ಕಿವಿಯಾಗುವ ಅಥವಾ ಗೊಂಬೆಯ ಕುಲುಕಾಟವನ್ನು ನಿಲ್ಲಿಸುವ ಪ್ರಯತ್ನವನ್ನೂ ಕನಿಷ್ಠ ಮಾಡುತ್ತಿಲ್ಲ. ವಿರೋಧ ಪಕ್ಷದವರು ಬಿಡಿ ಸ್ವಪಕ್ಷೀಯರೇ ಪ್ರತಿ ದಿನ ಹೊಸತೊಂದು ಆರೋಪಗಳನ್ನು ಯಡಿಯೂರಪ್ಪ ಮತ್ತು ಪುತ್ರನ ಮೇಲೆ ಮಾಡುತ್ತಿದ್ದರು. ಮಾಜಿ ಕೇಂದ್ರ ಸಚಿವ ಯತ್ನಾಳ್, ವಿಶ್ವನಾಥ್, ಬಿಎಸ್ ವೈ ಸಂಪುಟದ ಸಚಿವ ಸಿ.ಪಿ.ಯೋಗೇಶ್ವರ್ ನೇರಾನೇರವಾಗಿ ದಾಳಿ ನಡೆಸುತ್ತಿದ್ದರೂ ಕಣ್ಣೂ ಕಾಣದಂತಿದ್ದಾರೆ ಬಿಜೆಪಿ ವರಿಷ್ಠರು. ಕನಿಷ್ಠ ಶಿಸ್ತು ಕ್ರಮವೂ ಇಲ್ಲ. ರಾಜ್ಯಾಧ್ಯಕ್ಷರೂ ಬಹಿರಂಗ ಹೇಳಿಕೆ ನೀಡಬಾರದು ಎಂಬ ಹೇಳಿಕೆಗಳಿಗೆ ಮಾತ್ರ ಸೀಮಿತವಾದರು. ಉರಿಯುವ ಬೆಂಕಿಗೆ ಮತ್ತೆ ಮತ್ತೆ ತುಪ್ಪ ಬಿದ್ದರೂ ವರಿಷ್ಠರು ತಡೆಯುವ ಯಾವ ಕೆಲಸವನ್ನು ಮಾಡಲಿಲ್ಲ. ನೇರ ನಿಷ್ಠುರ ನಿರ್ಧಾರಗಳನ್ನು ಕೈಗೊಳ್ಳುವ ದೆಹಲಿ ನಾಯಕರು ಕರ್ನಾಟಕದ ವಿಚಾರದಲ್ಲಿ ಮಾತ್ರ ಬೇರೆಯದೇ ಯೋಜನೆಯಲ್ಲಿ ಇರುವಂತಿದೆ.
Advertisement
2001ರಲ್ಲಿ ಗುಜರಾತ್ ನಲ್ಲಿ ನಾಯಕತ್ವ ಬದಲಾವಣೆ ಮಾಡಲಾಗಿತ್ತು. ಮುಖ್ಯಮಂತ್ರಿಯಾಗಿದ್ದ ಕೇಶುಭಾಯ್ ಪಟೇಲ್ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಸಲಾಯಿತು. ಅವರ ಬದಲಿಗೆ ಆಗ ಸಂಘಟನಾ ಕಾರ್ಯದರ್ಶಿಯಾಗಿ ದೆಹಲಿಯಲ್ಲಿದ್ದ ನರೇಂದ್ರ ಮೋದಿ ಅವರನ್ನು ಅಟಲ್ ಬಿಹಾರಿ ವಾಜಪೇಯಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಮಾಡಿದರು. ಪಟೇಲ್ ಅಂತಹ ಪ್ರಮುಖ ಸಮುದಾಯದ ನಾಯಕನ ಬದಲಾವಣೆ ಮಾಡಿ ರಾಜ್ಯ ರಾಜಕೀಯದಿಂದ ಆರು ವರ್ಷಗಳಷ್ಟು ದೂರ ಇದ್ದ ಮೋದಿಯವರನ್ನು ಕರೆತಂದ ಹೈಕಮಾಂಡ್ ನಿರ್ಧಾರ ಅಂದು ಕೆಲಸ ಮಾಡಿತ್ತು. ಅಂತಹುದೇ ಪ್ಲ್ಯಾನ್ ಕರ್ನಾಟಕದಲ್ಲಿ ಕೆಲಸ ಮಾಡಬಹುದೇ? ಯಾಕೆಂದರೆ ಇದು ಬಿಜೆಪಿಗೆ ಕೆಲವು ರಾಜ್ಯಗಳಲ್ಲಿ ಮುಳುವಾಗಿದೆ ಕೂಡ. ದಿಲ್ಲಿಯಲ್ಲಿ ಮದನ್ ಲಾಲ್ ಖುರಾನಾ, ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್, ಮಧ್ಯ ಪ್ರದೇಶದಲ್ಲಿ ಉಮಾಭಾರತಿ ಅಷ್ಟೇ ಅಲ್ಲದೇ ಕರ್ನಾಟಕದಲ್ಲಿ 2011ರಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಬದಲಾಯಿಸಲಾಗಿತ್ತು. ಆದರೆ ಇದರಲ್ಲಿ ಮಧ್ಯ ಪ್ರದೇಶ ಒಂದನ್ನು ಬಿಟ್ಟು ಬೇರೆಲ್ಲಾ ಕಡೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ. ದಿಲ್ಲಿಯಲ್ಲಂತೂ ಇದುವರೆಗೆ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಗುಜರಾತ್ ನಲ್ಲಿ ಮಾಡಿದಂತೆ ರಾಜ್ಯ ರಾಜಕೀಯದಲ್ಲಿರದ ಯಾರಾನ್ನಾಗರೂ ಸಿಎಂ ಸ್ಥಾನಕ್ಕೆ ತರಬಹುದೇ? ಅಂತಹ ಯಾವುದೇ ಸಾಧ್ಯತೆಗಳಿದ್ದರೆ ಮೊದಲು ಕೇಳಿ ಬರುವ ಹೆಸರು ಬಿ.ಎಲ್.ಸಂತೋಷ್.
2011ರಲ್ಲಿ ಯಡಿಯೂರಪ್ಪ ಹೊಡೆತ
ಯಡಿಯೂರಪ್ಪ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಅಕ್ರಮ ಡಿ ನೋಟಿಫಿಕೇಶನ್ ಕಳಂಕದಿಂದಾಗಿ ರಾಜೀನಾಮೆ ನೀಡಬೇಕಾಯಿತು. ಕೇವಲ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಸುಮ್ಮನಿರದ ಬಿಎಸ್ ವೈ ಶಾಸಕ ಸ್ಥಾನಕ್ಕೆ, ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಹೆೊರ ನಡೆದಿದ್ದರು. ರಾಜೀನಾಮೆ ನೀಡುವಾಗಲೂ ಶಕ್ತಿ ಪ್ರದರ್ಶನ ಮಾಡಿದ್ದ ಬಿಎಸ್ ವೈ, ಕರ್ನಾಟಕ ಜನತಾ ಪಕ್ಷ ಎಂಬ ಹೊಸ ಪಕ್ಷ ಕಟ್ಟಿ ಬಿಜೆಪಿಗೆ ಸಡ್ಡು ಹೊಡೆದಿದ್ದರು. ಅದರ ನೇರ ಪರಿಣಾಮ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿತು. 110 ಶಾಸಕರಿದ್ದ ಬಿಜೆಪಿ ಆ ಚುನಾವಣೆಯಲ್ಲಿ ಗೆದ್ದಿದ್ದು ಕೇವಲ 40 ಸ್ಥಾನ ಮಾತ್ರ. ಕೆಜೆಪಿ ಹೊಡೆತದಿಂದಾಗಿ ಬಿಜೆಪಿ ಶೇ.13.9 ಮತ ಕಳೆದುಕೊಂಡಿತ್ತು. ಅದೇ ಕಾರಣದಿಂದ ಯಡಿಯೂರಪ್ಪನವರನ್ನು ಮತ್ತೆ ಬಿಜೆಪಿ ಕರೆಸಿಕೊಂಡಿತು. ಬಿಜೆಪಿ ಅಧಿಕಾರಕ್ಕೆ ಬಂತು. ಅದು ಯಡಿಯೂರಪ್ಪನವರ ಶಕ್ತಿ.
ಯಡಿಯೂರಪ್ಪ ಬಿಟ್ಟರೆ ಬೇರೆ ಯಾರು?
ರಾಜಕೀಯ ಪ್ರಹಸನಗಳು ಏನೇ ಇರಲಿ, ಅಂತೂ ಇಂತೂ ಯಡಿಯೂರಪ್ಪ ಮುಂದಿನ ಎರಡು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದಾದರೂ ಅದರ ನಂತರ ಪರ್ಯಾಯ ನಾಯಕನನ್ನು ಸಿದ್ದ ಮಾಡಬಲೇ ಬೇಕಾದ ಪರಿಸ್ಥಿತಿಯಿದೆ. ಯಡ್ಡಿ ನಂತರ ಮುಂದೆ ಯಾರು ಎಂದು ನೋಡಿದಾಗ ಸದ್ಯ ಕೇಳಿ ಬರುತ್ತಿರುವ ಹೆಸರು ಮುರುಗೇಶ್ ನಿರಾಣಿ, ಪ್ರಹ್ಲಾದ್ ಜೋಶಿ, ಅರವಿಂದ ಬೆಲ್ಲದ. ಸದ್ಯ ರಾಷ್ಟ್ರ ರಾಜಕೀಯದಲ್ಲಿರುವ ಜೋಶಿಯವರು ಮೋದಿ ಆಪ್ತರಲ್ಲಿ ಒಬ್ಬರು. ಸದ್ಯ ಪ್ರಬಲವಾಗಿ ಕೇಳಿಬರುತ್ತಿರುವ ಹೆಸರಿದು. ಉಳಿದಂತೆ ಮುರುಗೇಶ್ ನಿರಾಣಿ ಅವರಿಗೆ ಅಮಿತ್ ಶಾ ಶ್ರೀರಕ್ಷೆಯಿದೆ ಎನ್ನಲಾಗುತ್ತದೆ. ದೆಹಲಿಗೆ ಹೋದಾಗೆಲ್ಲಾ ನಿರಾಣಿಗೆ ಶಾ ಭೇಟಿಯ ಅವಕಾಶ ಸಿಗುತ್ತದೆ ಎನ್ನುವುದ ಗಮನಿಸಬೇಕಾದ ಅಂಶ. ಅಲ್ಲದೆ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಇದುವರೆಗೆ ಸಚಿವರೂ ಆಗಿರದ ಅರವಿಂದ ಬೆಲ್ಲದ ಹೆಸರು ಇತ್ತೀಚಿನ ದಿನಗಳಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ಅವರಲ್ಲದೆ ಸಿ.ಟಿ.ರವಿಯಂತಹ ಆರ್ ಎಸ್ಎಸ್ ಮೂಲದಿಂದ ನಾಯಕರ ಹೆಸರುಗಳು ಚಾಲ್ತಿಯಲ್ಲಿದೆ.
ಒಂದೂವರೆ ವರ್ಷದ ಹಿಂದೆ ಸಿಎಂ ಬದಲಾವಣೆ ಕೂಗು ಕೇಳಿಬಂದ ಕೂಡಲೇ ವರಿಷ್ಠರು ಏನಾದರೊಂದು ತೀರ್ಮಾನ ಮಾಡಿದ್ದರೆ ಈಗಾಗಲೇ ಹೊಸ ಸಿಎಂ ಬಂದು ಎಲ್ಲವೂ ತಣ್ಣಗಾಗುತ್ತಿತ್ತು. ಹೊಸ ಸಿಎಂ ನೇತೃತ್ವದಲ್ಲಿ 2023ರ ಚುನಾವಣೆಗೆ ಬಿಜೆಪಿ ಆತ್ಮವಿಶ್ವಾಸದಲ್ಲೇ ಹೋಗಬಹುದಿತ್ತು. ಆದರೆ ಸದ್ಯ ಎಲ್ಲವೂ ಗೋಜಲಾಗಿದೆ. ಆ ಕಡೆಯಿಂದ ಕಾಂಗ್ರೆಸ್ ಕೂಡಾ ಶಕ್ತಿ ಹೆಚ್ಚಿಸಿಕೊಳ್ಳುತ್ತಿದೆ. ಹೀಗಾಗಿ ಬಿಜೆಪಿ ವರಿಷ್ಠರ ದಕ್ಷಿಣದ ಒಂದೇ ಒಂದು ರಾಜ್ಯವನ್ನು ಉಳಿಸಿಕೊಳ್ಳಲು ಯಾವ ಮ್ಯಾಜಿಕ್ ಮಾಡುತ್ತಾರೆಂದು ಕಾದು ನೋಡಬೇಕಿದೆ.
*ಕೀರ್ತನ್ ಶೆಟ್ಟಿ ಬೋಳ