Advertisement

ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು: ಸಿಎಂ  

07:00 PM Feb 14, 2021 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿ ಎಂದು ಕರೆಯಲ್ಪಡುವ ಮೈಸೂರು ಐತಿಹಾಸಿಕ, ಪಾರಂಪರಿಕ ಹಾಗೂ ಧಾರ್ಮಿಕತೆಯ ಪ್ರಾಮುಖ್ಯತೆಯಿಂದ ಸುಂದರ ಪ್ರವಾಸಿ ತಾಣವಾಗಿದ್ದು, ಲಕ್ಷಾಂತರ ಜನರನ್ನು ಕೈ ಬೀಸಿ ಕರೆಯುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಚಿಂತನ ಪ್ರಕಾಶನ ಹಾಗೂ ಮುಂತಾದ ಸಂಘ- ಸಂಸ್ಥೆಗಳ ಸಹ ಯೋಗದೊಂದಿಗೆ ಕಲಾಮಂದಿರದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ರಚಿಸಿರುವ ಮೈಸೂರು ಸುತ್ತ ಮತ್ತ ನೂರೊಂದು ಪ್ರವಾಸಿ ತಾಣ ಮತ್ತು ಆಂಗ್ಲ ಭಾಷೆಗೆ ಅನುವಾದಿಸಿರುವ ಮೈಸೂರು – ದಿ ಟೂರಿಸ್ಟ್‌ ಪ್ಯಾರಡೈಸ್‌ ಕೃತಿಗಳ ಬಿಡುಗಡೆಗೊಳಿಸಿ ಮಾತನಾಡಿದರು.

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಮೈಸೂರಿನ ಹೊಟೇಲ್‌ ಉದ್ಯಮ, ಕೈಗಾರಿಕೆ, ಟ್ರಾವೆಲ್‌  ಏಜೆನ್ಸಿಗಳು ಆರ್ಥಿಕ ಹಿಂಜರಿತ ಅನುಭವಿಸುತ್ತಿವೆ. ಸುರಕ್ಷಿತ ನೀತಿ ನಿಯಮ ರೂಪಿಸಿ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2020-25 ಜಾರಿಗೊಳಿಸುವ ಮೂಲಕ ಸುಮಾರು 5 ಸಾವಿರ ಕೋಟಿ ಬಂಡವಾಳ ಹೂಡಿಕೆಯ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ 30 ಲಕ್ಷ ಉದ್ಯೋಗವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದೊರಕಿಸುವ ಮೂಲಕ ರಾಜ್ಯದ ಜಿಡಿಪಿಗೆ ಶೇ.15 ರಷ್ಟು ಆದಾಯವನ್ನು ಪ್ರವಾಸೋದ್ಯಮ ವಲಯದಿಂದ ನಿರೀಕ್ಷಿಸಲಾಗಿದೆ. ವಿವಿಧತೆಯಲ್ಲಿ ಏಕತೆ ಎಂಬಂತೆ, ಒಂದು ರಾಜ್ಯ ಹಲವು ಜಗತ್ತುಗಳು ಎಂಬ ಪರಿಕಲ್ಪನೆಯಡಿ ಪ್ರವಾ ಸೋದ್ಯಮ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದರು.

ರಾಜ್ಯದಲ್ಲಿರುವ ಸುಂದರ ಪ್ರವಾಸಿತಾಣಗಳ ಸಮಗ್ರ ಮಾಹಿತಿಯನ್ನೊಳಗೊಂಡ ಕರ್ನಾಟಕ ಪ್ರವಾಸೋದ್ಯಮ ಜಾಲ ತಾಣ ತೆರೆಯಲಾಗಿದ್ದು, ಈ ಜಾಲತಾಣವನ್ನು ಒಂದು ವರ್ಷ ದಲ್ಲಿ 10.5 ಕೋಟಿ ಜನ ವೀಕ್ಷಿಸಿದ್ದಾರೆ. ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಲಭ್ಯ ದೊರಕಿಸುವ ಸಲುವಾಗಿ 160 ಕಾಮಗಾರಿಯನ್ನು ಆಯ್ದ ಪ್ರವಾಸಿ ತಾಣಗಳಲ್ಲಿ ಯಶಸ್ವಿಗೊಳಿಸ ಲಾಗಿದೆ ಎಂದು ತಿಳಿಸಿದರು. ಹಂಪಿ, ಬಾದಾಮಿ, ಐಹೊಳೆ, ಬನವಾಸಿ ಒಳಗೊಂಡಂತೆ 20 ಆಯ್ದ ಪ್ರವಾಸಿತಾಣ ಗುರುತಿಸಿ ವಿಶ್ವದರ್ಜೆ ಪ್ರವಾಸಿ ತಾಣವಾಗಿಸಲು ಯೋಜನೆ ರೂಪಿಸ ಲಾಗಿದೆ. ಮೈಸೂರು ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಕುರಿತು ನೀಡಲಾಗಿರುವ ಮನವಿ ಸಂಬಂಧ ಕೂಡಲೇ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

ಎಸ್‌ .ಎ.ರಾಮದಾಸ್‌, ಎಲ್‌.ನಾಗೇಂದ್ರ, ತನ್ವೀರ್‌ ಸೇಠ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ವಾಸು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್‌ ಹಂಚೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next