Advertisement

ಸಂಪುಟ ವಿಸ್ತರಣೆ ಕಸರತ್ತು: ಸಚಿವ ಸ್ಥಾನ, ಪ್ರಭಾವಿ ಖಾತೆಗಳಿಗೆ ಲಾಬಿ ಶುರು

10:09 AM Dec 12, 2019 | mahesh |

ಬೆಂಗಳೂರು: ಉಪ ಚುನಾವಣೆಯಲ್ಲಿ ಭಾರೀ ಗೆಲುವಿನೊಂದಿಗೆ ಸರಕಾರವನ್ನು ಸುಭದ್ರ ಮಾಡಿಕೊಂಡಿರುವ ಬಿಜೆಪಿಯಲ್ಲಿ ಈಗ ಸಂಪುಟ ವಿಸ್ತರಣೆಯ ಕಸರತ್ತು ಶುರುವಾಗಿದೆ. ಸಚಿವ ಸ್ಥಾನ ಮತ್ತು ಪ್ರಭಾವಿ ಖಾತೆಗಳಿಗಾಗಿ ಮೂಲ ಮತ್ತು ವಲಸಿಗ ಶಾಸಕರಲ್ಲಿ ಪೈಪೋಟಿ ಆರಂಭವಾಗಿದೆ.  ಸದ್ಯದಲ್ಲೇ ದಿಲ್ಲಿಗೆ ತೆರಳಲಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿ, ಸಂಪುಟ ವಿಸ್ತರಣೆಯ ಬಗ್ಗೆ ಚರ್ಚಿಸಲಿದ್ದಾರೆ. ಅಲ್ಲಿ ಒಪ್ಪಿಗೆ ಪಡೆದು ಬಂದ ಅನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ.

Advertisement

ಡಿಸೆಂಬರ್‌ 16ರಿಂದ ಧನುರ್ಮಾಸ ಆರಂಭವಾಗಲಿದ್ದು, ಈ ವೇಳೆ ರಾಜಕಾರಣಿಗಳು ಸಾಮಾನ್ಯ ವಾಗಿ ಪ್ರಮಾಣವಚನ ಸಹಿತ ಯಾವುದೇ ಪ್ರಮುಖ ಕಾರ್ಯಕ್ರಮಕ್ಕೆ ಹಿಂದೇಟು ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಡಿ.16ಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಯಾಗುವ ಸಾಧ್ಯತೆಯೂ ಇದೆ. ಸದ್ಯ ಮೋದಿ ಮತ್ತು ಅಮಿತ್‌ ಶಾ ಝಾರ್ಖಂಡ್‌ ಚುನಾ ವಣೆಯ ಪ್ರಚಾರದಲ್ಲಿ ನಿರತರಾಗಿದ್ದು, ಅವರ ಲಭ್ಯತೆಯ ಆಧಾರದ ಮೇಲೆ ಸಂಪುಟ ವಿಸ್ತರಣೆಯ ದಿನಾಂಕ ನಿಗದಿಯಾಗುವ ಸಂಭವವಿದೆ.

ಮೂಲ ಬಿಜೆಪಿಗರ ಲಾಬಿ
ಉಪ ಚುನಾವಣೆಯಲ್ಲಿ ಗೆದ್ದವರಿಗೆಲ್ಲರಿಗೂ ಸಚಿವ ಸ್ಥಾನ ನೀಡಲಾಗುವುದು ಎಂದು ಸಿಎಂ ಬಿಎಸ್‌ವೈ ಚುನಾವಣೆ ಪ್ರಚಾರದ ವೇಳೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮೂಲ ಬಿಜೆಪಿಗರು ಲಾಬಿ ಶುರು ಮಾಡಿದ್ದಾರೆ. ಪಕ್ಷದ ಹಿರಿಯ ನಾಯಕರಾದ ಉಮೇಶ್‌ ಕತ್ತಿ, ಎಸ್‌.ಎ. ರಾಮದಾಸ್‌ ಮಂಗಳವಾರ ಬೆಳಗ್ಗೆ ಬಿಎಸ್‌ವೈ ಅವರನ್ನು ಡಾಲರ್ಸ್‌ ಕಾಲನಿಯ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿ, ವಿಸ್ತರಣೆ ವೇಳೆ ತಮಗೂ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಸಿ.ಪಿ.ಯೋಗೇಶ್ವರ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಲಾಗುತ್ತಿದೆ.

ಸೋತವರಿಗೂ ಅವಕಾಶ
ಸದ್ಯ ಉಪ ಚುನಾವಣೆಯಲ್ಲಿ ಸೋತಿರುವ ಎಂ.ಟಿ.ಬಿ. ನಾಗರಾಜ್‌ ಮತ್ತು ಎಚ್‌. ವಿಶ್ವನಾಥ್‌ ಅವ ರಿಗೂ ಸಚಿವ ಸ್ಥಾನ ನೀಡಬೇಕು ಎಂಬುದು ನೂತನ ಬಿಜೆಪಿ ಶಾಸಕರ ಆಶಯ. ಇದಕ್ಕೆ ಪೂರಕ ವೆಂಬಂತೆ ಎಸ್‌.ಟಿ. ಸೋಮಶೇಖರ್‌ ಅವರು, ಎಂ.ಟಿ.ಬಿ. ಮತ್ತು ವಿಶ್ವನಾಥ್‌ರನ್ನು ಬಿಜೆಪಿ ಕೈಬಿಡುವು ದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಜತೆಗೆ ಸೋಲಿನ ಬಳಿಕ ಬಿಜೆಪಿ ಸಂಸದ ಬಿ.ಎನ್‌. ಬಚ್ಚೇಗೌಡರ ವಿರುದ್ಧ ಮುನಿಸಿಕೊಂಡಿರುವ ಎಂಟಿಬಿ ನಾಗರಾಜ್‌ ಅವರ ಮನವೊಲಿಕೆಗೆ ಬಿಎಸ್‌ವೈ ದಿನವಿಡೀ ಪ್ರಯತ್ನ ಮಾಡಿದ್ದಾರೆ. ಇನ್ನು ಉಪ ಚುನಾವಣೆಗೆ ಸ್ಪರ್ಧಿಸದ ಆರ್‌.ಶಂಕರ್‌ ಅವರನ್ನು ಪರಿಷತ್‌ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡುವುದಾಗಿ ಈ ಹಿಂದೆಯೇ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಅದರಂತೆ ಸಚಿವ ಸ್ಥಾನ ನೀಡಬೇಕಿದೆ. ಹೀಗಾಗಿ ಸಂಪುಟ ವಿಸ್ತರಣೆ ಕಗ್ಗಂಟಾಗುವ ಲಕ್ಷಣಗಳಿವೆ.

ಖಾತೆ ಹಂಚಿಕೆ ಲೆಕ್ಕಾಚಾರ
ಉಪ ಚುನಾವಣೆಯಲ್ಲಿ ಗೆದ್ದು ಬರುವ ನೂತನ ಶಾಸಕರಿಗೆ ಆಯ್ದ ಪ್ರಭಾವಿ ಖಾತೆಗಳನ್ನೇ ನೀಡುವುದಾಗಿ ಹಿಂದೆಯೇ ಭರವಸೆ ನೀಡಲಾಗಿತ್ತು. ಅದರಂತೆ ಕೆಲವು ಶಾಸಕರು ತಮಗೆ ಇಂಥದ್ದೇ ಖಾತೆ ಹಂಚಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾರಂಭಿಸಿದ್ದಾರೆ. ಮುಖ್ಯಮಂತ್ರಿಗಳ ಬಳಿಯಿರುವ ಖಾತೆಗಳು ಸಹಿತ ಹಲವು ಸಚಿವರಿಗೆ ಹೆಚ್ಚುವರಿಯಾಗಿ ವಹಿಸಿರುವ ಖಾತೆಗಳ ಮೇಲೂ ಕಣ್ಣಿಟ್ಟಿರುವ ಶಾಸಕರು ಅದನ್ನು ಗಿಟ್ಟಿಸಿಕೊಳ್ಳಲು ಒತ್ತಡ ಹೇರಲಾರಂಭಿಸಿದ್ದಾರೆ ಎನ್ನಲಾಗಿದೆ.

Advertisement

ಬಚ್ಚೇಗೌಡ ವಿರುದ್ಧ ಅಸಮಾಧಾನ
ಹೊಸಕೋಟೆ ಕ್ಷೇತ್ರದಲ್ಲಿ ಪರಾಭವಗೊಂಡ ಎಂ.ಟಿ.ಬಿ. ನಾಗರಾಜ್‌ ನೇರವಾಗಿ ಬಿ.ಎನ್‌.ಬಚ್ಚೇ ಗೌಡರ ವಿರುದ್ಧ ಸಮರ ಸಾರಿದ್ದಾರೆ. ಮಂಗಳ ವಾರ ಬೆಳಗ್ಗೆ ಸಿಎಂ ನಿವಾಸಕ್ಕೆ ಬಂದಿದ್ದ ಅವರು, ಬಚ್ಚೇಗೌಡ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದರು. ಆಗ ಬಿಎಸ್‌ವೈ ಅವರು, ನಾಗರಾಜ್‌ರನ್ನು ಸಂತೈಸಿದರೂ ಸಮಾಧಾನ ಗೊಳ್ಳದೆ ಬೇಸರದಿಂದಲೇ ತೆರಳಿದ್ದರು. ಕಡೆಗೆ ಸಂಜೆ ವೇಳೆಗೆ ಎಂಟಿಬಿ ನಿವಾಸಕ್ಕೇ ತೆರಳಿದ ಬಿಎಸ್‌ವೈ ಗೌರವಯುತ ಸ್ಥಾನಮಾನ ನೀಡುವ ಬಗ್ಗೆ ಚರ್ಚಿಸುವ ಭರವಸೆ ನೀಡಿದರು.

ಬೆಂಗಳೂರಿಗೆ ಸಿಂಹಪಾಲು
ಸದ್ಯ ಬೆಂಗಳೂರನ್ನು ಡಿಸಿಎಂ ಅಶ್ವತ್ಥ ನಾರಾಯಣ, ಸಚಿವರಾದ ಆರ್‌.ಅಶೋಕ್‌, ಎಸ್‌. ಸುರೇಶ್‌ ಕುಮಾರ್‌, ವಿ. ಸೋಮಣ್ಣ ಪ್ರತಿನಿಧಿಸುತ್ತಿದ್ದಾರೆ. ಇವರ ಜತೆಗೆ ಗೋಪಾಲಯ್ಯ, ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜು ಸೇರಿಕೊಳ್ಳಲಿದ್ದಾರೆ. ಆಗ ಬೆಂಗಳೂರಿನ ಸಚಿವರ ಸಂಖ್ಯೆ 7ಕ್ಕೆ ಏರಿಕೆಯಾಗಲಿದೆ.

ಬೆಳಗಾವಿಗೆ ಬಂಪರ್‌
ಬೆಳಗಾವಿಗೂ ಸಚಿವ ಸ್ಥಾನದ ಬಂಪರ್‌ ಸಿಗಲಿದೆ. ಸದ್ಯ ಡಿಸಿಎಂ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಇದ್ದಾರೆ. ಹೊಸದಾಗಿ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ , ಶ್ರೀಮಂತ ಪಾಟೀಲ್‌ ಸಚಿವರಾಗಬಹುದು. ಒಂದು ವೇಳೆ ಉಮೇಶ್‌ ಕತ್ತಿ ಅವರಿಗೂ ಸಚಿವ ಸ್ಥಾನ ನೀಡಿದರೆ ಆರು ಮಂದಿಗೆ ಅವಕಾಶ ಸಿಕ್ಕಿದಂತಾಗುತ್ತದೆ.

ಉಪ ಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ನೀಡಲಾಗುವುದು. ಮೂರ್‍ನಾಲ್ಕು ದಿನಗಳಲ್ಲಿ ದಿಲ್ಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ.
– ಬಿ.ಎಸ್‌. ಯಡಿಯೂರಪ್ಪ , ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next