ಬೆಂಗಳೂರು: ಉತ್ತರ ಕರ್ನಾಟಕದ ನೆರೆ ಪೀಡಿತ ಐದು ಜಿಲ್ಲೆಗಳಲ್ಲಿ ಇಂದಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಈಗಾಗಲೇ ಬೆಳಗಾವಿ ತಲುಪಿರುವ ಸಿಎಂ ಬಿಎಸ್ ವೈ ನೆರೆ ಹಾನಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಬೆಳಗಾವಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ ವೈ. ಉತ್ತರ ಕರ್ನಾಟಕದ ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಖುದ್ದು ಸಮೀಕ್ಷೆ ನಡೆಸಿ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದೇನೆ. ಪ್ರವಾಹದಿಂದ ಆಗಿರುವ ನಷ್ಟ ಹಾಗೂ ಅನಾಹುತದ ಮಾಹಿತಿ ಪಡೆದು ಪರಿಹಾರ ಕಾರ್ಯಗಳ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಬಹುತೇಕ ಎಲ್ಲ ಜಲಾಶಯಗಳು ಭರ್ತಿಯಾಗಿದೆ. ದೇವರ ದಯೆಯಿಂದ ಹೆಚ್ಚಿನ ಅನಾಹುತಗಳಾಗಿಲ್ಲ. ಮಹಾರಾಷ್ಟ್ರ ಭಾಗದಲ್ಲಿ ಮಳೆ ಕಡಿಮೆಯಾಗಿರುವುದರಿಂದ ಪ್ರವಾಹ ಪರಿಸ್ಥಿತಿ ನಿಯಂತ್ರಣ ದಲ್ಲಿದೆ. ವೈಮಾನಿಕ ಸಮೀಕ್ಷೆ ನಡೆಸಿ ಸಂಪೂರ್ಣ ಪರಿಸ್ಥಿತಿ ಅವಲೋಕಿಸಲಾಗುವುದು. ಬೆಳೆ ಹಾನಿ, ಆಸ್ತಿ ನಷ್ಟದ ಬಗ್ಗೆ ವರದಿ ಪಡೆದು ಸರ್ಕಾರದಿಂಸ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಅಣ್ಣಾಮಲೈ ಬಿಜೆಪಿ ಸೇರ್ಪಡೆ ಖಚಿತ: ತಮಿಳುನಾಡು ರಾಜಕೀಯದಲ್ಲಿ ಕಮಲ ಅರಳಿಸಲು ಅಣ್ಣಾಮಲೈ ಸಜ್ಜು
ಸಿಎಂ ಯಡಿಯೂರಪ್ಪನವರ ಜೊತೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್ ಕೂಡ ಸಮೀಕ್ಷೆ ನಡೆಸಲಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಪ್ರವಾಹದಿಂದ ಆಗಿರುವ ಅನಾಹುತಗಳ ಬಗ್ಗೆ ಸಿಎಂ ವೈಮಾನಿಕ ಸಮೀಕ್ಷೆ ನಡೆಸಿ, ಮಾಹಿತಿ ಪಡೆಯಲಿದ್ದಾರೆ.