Advertisement

ಸಿಎಂಗೆ ಕಲ್ಯಾಣ ಕರ್ನಾಟಕ “ಶ್ರೀ’ರಕ್ಷೆ

10:59 PM Jul 22, 2021 | Team Udayavani |

ಯಾದಗಿರಿ: ಹಲವು ವರ್ಷಗಳ ಜನಪರ ಹೋರಾಟದಿಂದಾಗಿ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಎಲ್ಲ ವರ್ಗದ ಜನರಿಗೆ ಜನಪರ ಯೋಜನೆ ನೀಡಿದ್ದರಿಂದ ಎಲ್ಲ ವರ್ಗದ ಜನರ ಪ್ರೀತಿ-ವಿಶ್ವಾಸ ಅವರ ಮೇಲಿದೆ. ರಾಜ್ಯಕ್ಕೆ ಅವರ ಆಡಳಿತ ಅಗತ್ಯವಿದೆ ಎಂದು  ಮಠಾಧೀಶರು ಬಿಎಸ್‌ವೈ ಪರ ದನಿ ಎತ್ತಿದ್ದಾರೆ.

Advertisement

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ಮಠಾಧೀಶರ ಒಕ್ಕೂಟದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ| ಗಂಗಾಧರ ಶ್ರೀಗಳು, ಬಿಜೆಪಿ ವರಿಷ್ಠರು ಬಿಎಸ್‌ವೈ ಅವರನ್ನು  ಮುಂದುವರಿಸುವುದು ಸೂಕ್ತ. ಸರಳ ವ್ಯಕ್ತಿತ್ವದ ಜತೆಗೆ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸುವ ವ್ಯಕ್ತಿ, ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಗುರುಮಠಕಲ್‌ ಖಾಸಾಮಠದ ಪೀಠಾ ಧೀಪತಿ ಶಾಂತವೀರ ಗುರುಮುರು ಘ ರಾಜೇಂದ್ರ ಸ್ವಾಮೀಜಿ, ನೇರಡಗುಂಬದ ಪಂಚಮಸಿದ್ಧಲಿಂಗ ಶ್ರೀ, ಹೆಡಗಿ ಮದ್ರಾದ ಶಾಂತಮಲ್ಲಿಕಾರ್ಜುನ ಶ್ರೀ, ಶಹಾಪುರದ ಫಕೀರೇಶ್ವರ ಮಠದ  ಗುರುಪಾದಯ್ಯ ಶ್ರೀ, ದಾಸಬಾಳ ಮಠದ ವೀರೇಶ್ವರ ಶ್ರೀ, ಕಡೇಚೂರಿನ ಗುರುಮೂರ್ತಿ ಶಿವಾಚಾರ್ಯ ಶ್ರೀ, ಕೆಂಬಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯ ಶ್ರೀ  ಉಪಸ್ಥಿತರಿದ್ದರು.

ತಪ್ಪು ಹೆಜ್ಜೆ  ಇಟ್ಟರೆ ಬಿಜೆಪಿಗೆ ಸಂಕಷ್ಟ‌: ಗಿರಿಸಿದ್ದೇಶ್ವರ ಶ್ರೀ :

ಹೊನ್ನಾಳಿ:  ಕೋವಿಡ್‌ ಸಾಂಕ್ರಾಮಿಕ ಹಾವಳಿ ಮಧ್ಯೆಯೂ ಉತ್ತಮ ವಾಗಿ ಕೆಲಸ ಮಾಡುತ್ತಿರುವ ಯಡಿಯೂರಪ್ಪ ಅವರನ್ನು  ಪದಚ್ಯುತಗೊಳಿಸುವ ಯತ್ನ ನಡೆದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದರಲ್ಲಿ ತಪ್ಪು ಹೆಜ್ಜೆ ಇಟ್ಟರೆ ಬಿಜೆಪಿಗೆ ಸಂಕಷ್ಟವಾಗಲಿದೆ ಎಂದು ತಾಲೂಕಿನ ಉಜ್ಜಯಿನಿ ಶಾಖಾ ಮಠ ಹೊಟ್ಯಾಪುರ ಹಿರೇಮಠದ ಪೀಠಾಧ್ಯಕ್ಷ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶ್ರೀಗಳು,  ಬಿಎಸ್‌ವೈ ಎಲ್ಲ ಸಮುದಾಯಗಳ ಒಳಿತಿಗೆ ಶ್ರಮಿಸುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಒಂದೊಮ್ಮೆ ಅವರ ಪಕ್ಷದ ವರಿಷ್ಠರು ತಪ್ಪು ಹೆಜ್ಜೆ ಇಟ್ಟರೆ ಅದು ರಾಜ್ಯದ ಅಭಿವೃದ್ಧಿಗೂ ಮಾರಕವಾಗುತ್ತದೆ. ಸರಕಾರ ನಡೆಸುವಾಗ ಸಣ್ಣಪುಟ್ಟ ಲೋಪ ಸಹಜ. ಆ ಲೋಪ ತಿದ್ದಿಕೊಳ್ಳಲು ಅವಕಾಶ ಕೊಡುವುದು ಬಿಟ್ಟು ಅಧಿ ಕಾರದಿಂದಲೇ ಕೆಳಗಿಳಿಸಲು ಸಂಚು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ.

ಯಡಿಯೂರಪ್ಪ ಅವರ ಬದಲಾವಣೆ ಬಗ್ಗೆ ಆರೇಳು ತಿಂಗಳ ಹಿಂದೆಯೇ  ಹೇಳಿದ್ದೆ .  ಅದು ಈಗ ನಿಜವಾಗುತ್ತಿದೆ . ಯಡಿಯೂರಪ್ಪ ಬಳಿಕ ಬರುವ ಮುಖ್ಯ ಮಂತ್ರಿಯೂ  ಭ್ರಷ್ಟರೇ ಆಗಿರುತ್ತಾರೆ. ಹೀಗಾಗಿ ಅವರು ಸರಕಾರ ಮಾಡದಿರುವುದೇ ಒಳ್ಳೆಯದು. -ಸಿದ್ದರಾಮಯ್ಯ ವಿಪಕ್ಷ ನಾಯಕ

ಬಿಜೆಪಿಗೂ ನಮಗೂ ಸಂಬಂಧವಿಲ್ಲ. ನಾಯಕತ್ವ ಬದಲಾವಣೆ ಅವರ ಪಾರ್ಟಿಗೆ ಸಂಬಂಧಿಸಿದ ವಿಚಾರ. ಜನರಿಗೆ ಬಿಜೆಪಿ ಮೇಲೆ ವಿಶ್ವಾಸ ಕಳೆದು ಹೋಗಿದೆ  .-ಡಿ.ಕೆ.ಶಿವಕುಮಾರ್‌ 

ನಮ್ಮ ತಂದೆ ಯಡಿಯೂರಪ್ಪ ಅವರು ಹೋರಾಟದ ಮೂಲಕ ಅ ಧಿಕಾರಕ್ಕೆ ಬಂದವರು. ಯಾವಾಗಲೂ ಅಭಿವೃದ್ಧಿಯನ್ನೇ ಉಸಿರಾಗಿಸಿಕೊಂಡವರು. ಅವರು ಪಕ್ಷದ ಶಿಸ್ತಿನ ಸಿಪಾಯಿಯಂತೆ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. -ಬಿ. ವೈ. ರಾಘವೇಂದ್ರ, ಸಂಸದ 

ಬಿಎಸ್‌ವೈ ಪರ ದಯಾನಂದಪುರಿ ಶ್ರೀ :

ಬಳ್ಳಾರಿ, ಜು. 22: ಸಿಎಂ ಯಡಿಯೂರಪ್ಪ ಬದಲಾವಣೆಗೆ  ನೇಕಾರ ಸಮುದಾಯದ ದಯಾನಂದ ಪುರಿ ಸ್ವಾಮೀಜಿ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪರನ್ನು  ಗೌರವಯುತವಾಗಿ ನಡೆಸಿಕೊಳ್ಳುವುದರ ಜತೆಗೆ ಮುಂದಿನ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಮುಂದುವರಿಯಲು ಅವಕಾಶ ನೀಡಬೇಕು. ಯಡಿಯೂರಪ್ಪ ಪ್ರಶ್ನಾತೀತ ನಾಯಕ. ದಕ್ಷ ಆಡಳಿತಗಾರ. ಅವರು ಮುಂದುವರಿದರೆ ರಾಜ್ಯಕ್ಕೆ ಒಳಿತು ಎಂದು ಶ್ರೀಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next